Home ಬೆಂಗಳೂರು ನಗರ HD Kumaraswamy | ರಾಜ್ಯ ಕಾಂಗ್ರೆಸ್ ಸರಕಾರವನ್ನು ವಜಾ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

HD Kumaraswamy | ರಾಜ್ಯ ಕಾಂಗ್ರೆಸ್ ಸರಕಾರವನ್ನು ವಜಾ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

24
0
HD Kumaraswamy demands to dismiss state Congress government
HD Kumaraswamy demands to dismiss state Congress government

ಅಕ್ರಮವಾಗಿ ಗೆದ್ದಿರುವ ಕಾಂಗ್ರೆಸ್ ಶಾಸಕರ ಅನರ್ಹತೆಗೆ ಚುನಾವಣಾ ಆಯೋಗಕ್ಕೆ ಒತ್ತಾಯ

75 ವರ್ಷಗಳ ಸ್ವಾತಂತ್ರ್ಯ ಭಾರತದ ಅತಿದೊಡ್ಡ ಚುನಾವಣಾ ಅಕ್ರಮ ಎಂದ ಮಾಜಿ ಎಂ

ಬೆಂಗಳೂರು:

ಮತದಾರರಿಗೆ ಆಮಿಷ ಒಡ್ಡಿ, ಕೂಪನ್ ಮತ್ತು ಗ್ಯಾರಂಟಿ ಕಾರ್ಡುಗಳನ್ನು ಹಂಚಿ ಅಕ್ರಮ ಮಾರ್ಗದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರಕಾರವನ್ನು ವಜಾ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಒತ್ತಾಯ ಮಾಡಿರುವ ಅವರು; ಅಪ್ರಜಾಸತ್ತಾತ್ಮಕವಾಗಿ ಗೆದ್ದಿರುವ ಆ ಪಕ್ಷದ ಎಲ್ಲಾ 135 ಶಾಸಕರನ್ನೂ ಅನರ್ಹಗೊಳಿಸಬೇಕು. ಕೇಂದ್ರ ಸರಕಾರವೂ ಈ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು ಹಾಗೂ ಈ ಅಕ್ರಮ ಸರಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಪಡಿಸಿದರು.

ಮತದಾರರಿಗೆ ಸಲ್ಲದ ಆಸೆ, ಆಮಿಷ ಒಡ್ಡಿ ಈ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ನಾನು ಪದೇಪದೆ ಹೇಳಿದ್ದೆ. ಗಿಫ್ಟ್ ಕೂಪನ್, ತವಾ, ಕುಕ್ಕರ್, ಇಸ್ತ್ರಿಪೆಟ್ಟಿಗೆ, ಸೀರೆ ಕೊಟ್ಟ ರಾಜ್ಯ ಕಾಂಗ್ರೆಸ್ ಪಕ್ಷದ ‘ಅಸಲಿ ಹಸ್ತ’ದ ಹಕೀಕತ್ತು ಹೀಗಿದೆ ನೋಡಿ. ಸ್ವತಃ ರಾಜ್ಯದ ಘನತವೇತ್ತ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸುಪುತ್ರನೇ ರಾಜ್ಯಕ್ಕೆ ಸತ್ಯದ ಸಾಕ್ಷಾತ್ಕಾರ ಮಾಡಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಉಳಿದ ಕ್ಷೇತ್ರಗಳ ಕಥೆ ಹಾಗಿರಲಿ, ಕರ್ನಾಟಕದ ಮುಖ್ಯಮಂತ್ರಿಗಳ ಸ್ವಕ್ಷೇತ್ರ ವರುಣಾದಲ್ಲಿಯೇ ಜಾತಿ ಸಮಾವೇಶ ನಡೆಸಿ ಕುಕ್ಕರ್, ಇಸ್ತ್ರಿಪೆಟ್ಟಿಗೆಗಳ ಭರ್ಜರಿ ಸಮಾರಾಧನೆ ನಡೆದಿದೆ. ಸಮಾಜವಾದಿ ಮುಖ್ಯಮಂತ್ರಿ ಮಹೋದಯರ ಹಾದಿಯಲ್ಲೇ ನಡೆದಿರುವ ಇಡೀ ರಾಜ್ಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅದೇ ವಾಮಮಾರ್ಗದಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ಕನ್ನಡಿಗರ ಪ್ರಜಾಸತ್ತೆಯ ಮಹಾದೇಗುಲ ವಿಧಾನಸೌಧದ ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರ, ಮಾಗಡಿ ಸೇರಿ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗಿಫ್ಟ್ ಕೂಪನ್, ಗ್ಯಾರಂಟಿ ಕೂಪನ್ ಹಂಚಿಯೇ ಗೆದ್ದಿದ್ದಾರೆ. ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರೇ ಸಹಿ ಹಾಕಿದ ಅಧಿಕೃತ ಅಮಿಷಗಳ 5 ಗ್ಯಾರಂಟಿ ಕೂಪನ್ ಗಳನ್ನು ಮನೆಮನೆಗೂ ಹಂಚಿ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ. ಇದು ಸ್ವಾತಂತ್ರ್ಯ ಭಾರತ ಕಂಡ, ಅದೂ ಅಮೃತಕಾಲದಲ್ಲಿ ನಡೆದಿರುವ ಅತಿದೊಡ್ಡ ಚುನಾವಣಾ ಅಕ್ರಮ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಹೆಗ್ಗಳಿಕೆಯ ಕಗ್ಗೊಲೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಈ ಚುನಾವಣಾ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಬೇಕು. ಖಡಕ್ ತನಿಖೆ ನಡೆಸಿ ರಾಜ್ಯ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹೊರ ಹಾಕಲೇಬೇಕು. ಅಪ್ರಜಾಸತ್ತಾತ್ಮಕವಾಗಿ ಗೆದ್ದಿರುವ ಆ ಪಕ್ಷದ ಎಲ್ಲಾ 135 ಶಾಸಕರನ್ನೂ ಅನರ್ಹಗೊಳಿಸಬೇಕು. ಕೇಂದ್ರ ಸರಕಾರವೂ ಈ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು. ಈ ಅಕ್ರಮ ಸರಕಾರವನ್ನು ವಜಾ ಮಾಡಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷವು ಇಡೀ ಚುನಾವಣೆ ವ್ಯವಸ್ಥೆಯನ್ನೇ ನಾಶ ಮಾಡಲು ಸಂಚು ಹೂಡಿದೆ. ಕರ್ನಾಟಕ ಮಾದರಿ ಎನ್ನುವ ವಿನಾಶಕಾರಿ ಮಹಾಮಾರಿಯನ್ನು ಇಡೀ ದೇಶಕ್ಕೆ ವಿಸ್ತರಿಸಲು ಹೊರಟಿದೆ. ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ ಸೇರಿ ಶೀಘ್ರವೇ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಈ ಷಡ್ಯಂತ್ರ, ಕುತಂತ್ರ, ಕುಯುಕ್ತಿಗಳನ್ನು ಪ್ರಯೋಗ ಮಾಡಲು ಹೊರಟಿದೆ. ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ವಿಷಪ್ರಾಶನ ಮಾಡುವ ಈ ದೇಶದ್ರೋಹಿ ಕೃತ್ಯವನ್ನು ಎಲ್ಲರೂ ತಡೆಯಲೇಬೇಕಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಕಾಂಗ್ರೆಸ್ ಕಪಿಮುಷ್ಟಿಯಿಂದ ಪ್ರಜಾಪ್ರಭುತ್ವ ಹಾಗೂ ಭಾರತವನ್ನು ಉಳಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರತಿಪಾದಿಸಿದ್ದಾರೆ.

LEAVE A REPLY

Please enter your comment!
Please enter your name here