ಬೆಂಗಳೂರು:
ಸಾಲದಿಂದ ದೇಶ ದಿವಾಳಿಯಾಗಿದೆ ಎಂಬ ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ಸಿಎಂ ಸಿದ್ದರಾಮಯ್ಯಗೆ ಇಲ್ಲ. ಹಿಂದೆ 5 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ 2,45,000 ಕೋಟಿ ರೂ. ಸಾಲ ಮಾಡಿದ್ದರು. ಸಾಲದ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಶ್ನೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತೆಲಂಗಾಣದಲ್ಲಿ ನರೇಂದ್ರ ಮೋದಿ ಅವರಿಗೆ ಸಿದ್ದರಾಮಯ್ಯ ಅವರು ಚಾಲೆಂಜ್ ಮಾಡಿದ್ದಾರೆ. ನನ್ನ ಹೆಸರು ಕೇಳಿದರೆ ಅವರಿಗೆ ಭಯ, ಸಾಲದಿಂದ ದೇಶ ದಿವಾಳಿಯಾಗಿದೆ ಎಂದಿದ್ದಾರೆ. ಆದರೆ, ಇವರ ಸರಕಾರದಲ್ಲಿ ಏನಾಗಿದೆ? ಎಷ್ಟು ಸಾಲ ಮಾಡಿದ್ದಾರೆ? ಈಗ 85,815 ಕೋಟಿ ರೂ. ಸಾಲ ಮಾಡಲು ಹೊರಟಿದ್ದಾರೆ. ನನ್ನ 20 ತಿಂಗಳ ಆಡಳಿತದಲ್ಲಿ 3,500 ಕೋಟಿ ಸಾಲ ಮಾಡಲಾಗಿತ್ತು. ಕಳೆದ 12 ವರ್ಷದಲ್ಲಿ ಇದ್ದ ಸರಕಾರಗಳು 1 ಲಕ್ಷ ಕೋಟಿ ಸಾಲ ಮಾಡಿವೆ. ಹಿಂದೆ 5 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ 2,45,000 ಕೋಟಿ ರೂ. ಸಾಲ ಮಾಡಿದ್ದರು. ಸಾಲದ ಬಗ್ಗೆ ಮಾತನಾಡಲು ಇವರಿಗೆ ಯಾವ ನಿಮಗೆ ಯಾವ ನೈತಿಕತೆ ಇದೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.
ಈಗ ರಾಜ್ಯದ ಸಾಲ ಪ್ರಮಾಣ 5,71,600 ಕೋಟಿ ರೂ.ಗಳಷ್ಟಿದೆ. ಹೊಸದಾಗಿ ಇವರು ಬಜೆಟ್ʼನಲ್ಲಿ 85,815 ಕೋಟಿ ರೂ. ಸಾಲದ ಗುರಿ ಇಟ್ಟುಕೊಂಡಿದ್ದಾರೆ. ಪ್ರತೀ ವರ್ಷ 56,000 ಕೋಟಿ ರೂ. ಬಡ್ಡಿ ಕಟ್ಟಬೇಕು ಎಂದು ಸ್ವತಃ ಸಿಎಂ ಹೇಳಿದ್ದಾರೆ. ನಿಮ್ಮ ಸರಕಾರದ ಅಧಿಕಾರಿಗಳೇ ರಾಜ್ಯದ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಎನ್ನುತ್ತಿದ್ದಾರೆ. ಇದನ್ನೇ ತೆಲಂಗಾಣಕ್ಕೆ, ಇನ್ನಿತರೆ ರಾಜ್ಯಗಳಿಗೆ ವಿಸ್ತರಿಸುತ್ತೀರಾ? ಎಂದು ಅವರು ಪ್ರಶ್ನಿಸಿದರು.
ಪರಿಸ್ಥಿತಿ ಇಷ್ಟು ಹದಗೆಟ್ಟಿದ್ದರೂ ಕಪ್ಪುಹಣಕ್ಕೆ ಕೊರತೆ ಇಲ್ಲ, ಕಲೆಕ್ಷನ್ನಿಗೂ ಸಮಸ್ಯೆ ಇಲ್ಲ. ಖಜಾನೆಯಲ್ಲಿ ದುಡ್ಡಿಲ್ಲ, ಅದರೆ ಆಯ್ದ ವ್ಯಕ್ತಿಗಳ ಮನೆಯಲ್ಲಿ ದುಡ್ಡಿದೆ. ಮೊನ್ನೆಯ ಐಟಿ ದಾಳಿಯಲ್ಲಿ ಯಾರಯಾರ ಮನೆಯಲ್ಲಿ ಎಷ್ಟೆಷ್ಟು ಕೋಟಿ ಹಣ ಸಿಕ್ಕಿತು ಎನ್ನುವುದನ್ನು ಜನ ನೋಡಿದ್ದಾರೆ. ಕರ್ನಾಟಕದ ದುಡ್ಡಿನಲ್ಲಿ ಕಾಂಗ್ರೆಸ್ ಪಕ್ಷ ಐದು ರಾಜ್ಯಗಳ ಚುನಾವಣೆ ನಡೆಸುತ್ತಿದೆ. ಇದು ಸತ್ಯ ಎಂದು ಅವರು ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಯಾರು ಹೆಚ್ಚು ಹಣ ಕೊಡುತ್ತಾರೆ ಅವರು ಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಯಾರು ಕೊಡುವುದಿಲ್ಲವೋ ಅವರು ಮಂತ್ರಿಗಳಾಗಿರೋದಿಲ್ಲ. ಹಣ ಕೊಟ್ಟವರಿಗೆ ಅಧಿಕಾರ ಇರುತ್ತದೆ. ಇಲ್ಲಿ ಅಧಿಕಾರ ಹಂಚಿಕೆ ಎನ್ನುವುದು ಇಲ್ಲವೇ ಇಲ್ಲ. ಹಣ ಕೊಟ್ಟವರಿಗೆ ಅಧಿಕಾರ ಅಷ್ಟೇ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಇದನ್ನೇ ಹೇಳಿದೆ ಎಂದು ಕುಮಾರಸ್ವಾಮಿ ಎಂದರು.