- ಪ್ರಮಾಣದ ಸವಾಲು ಹಾಕಿದ್ದ ಕೈ ಶಾಸಕನಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು:
ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿರುವ ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು; ಸಿಎಂ, ಡಿಸಿಎಂ ಸೇರಿ ಎಲ್ಲಾ ಸಚಿವರು ನಾವು ವರ್ಗಾವಣೆಯಲ್ಲಿ ಕಳೆದ 5 ತಿಂಗಳ ಸರ್ಕಾರದಲ್ಲಿ ಹಣ ತೆಗೆದುಕೊಂಡಿಲ್ಲ ಅಂತ ಆಣೆ ಮಾಡಲಿ ಎಂದು ಆಹ್ವಾನ ನೀಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಅವರು ಇಂದು ಮಾಧ್ಯಮಗಳ ಜತೆ ಮಾತನಾಡಿದರು.
ಶಾಸಕ ಬಾಲಕೃಷ್ಣ ಅವರ ಸವಾಲ್ ನಾನು ಸ್ವೀಕಾರ ಮಾಡುತ್ತೇನೆ. ಅದರಂತೆ ನನ್ನ ಸವಾಲನ್ನು ಅವರು ಸ್ವೀಕಾರ ಮಾಡಲಿ. ನಾನು, ನನ್ನ ಕುಟುಂಬ ಸರ್ಕಾರದ ಹಣವನ್ನು ಲೂಟಿ ಮಾಡಿಲ್ಲ. ಅಧಿಕಾರಿಗಳ ನಿಯೋಜನೆಯಲ್ಲಿ ಹಣಕ್ಕೆ ಅವಕಾಶ ನೀಡಿಲ್ಲ. ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿ, ತಾಯಿ ಚಾಮುಂಡೇಶ್ವರಿ ಸನ್ನಿದಿ ಎಲ್ಲೇ ಆದರೂ ನಾನು ಆಣೆ ಮಾಡಲು ಸಿದ್ಧ ಎಂದರು ಅವರು.
ಚುನಾವಣೆ ವೇಳೆ ನಮ್ಮ ಮನೆ ಹಣ ಖರ್ಚು ಮಾಡಿಲ್ಲ ಎಂದು ಅನೇಕ ಸಲ ಹೇಳಿದ್ದೇನೆ. ಸದನದಲ್ಲಿಯೇ ಈ ಮಾತನ್ನು ಹೇಳಿದ್ದೇನೆ. ನಮ್ಮ ಕೆಲಸ ನೋಡಿ ಕೆಲವರು ನೀಡಿದ ದೇಣಿಗೆಯಿಂದ ಪಕ್ಷ ಕಟ್ಟಿದ್ದೇನೆ. ಚುನಾವಣೆ ಎದುರಿಸಿದ್ದೇನೆ. ಇಂಥ ಪಾಪದ ಹಣದಿಂದ ಚುನಾವಣೆ ಮಾಡಿಲ್ಲ ಎಂದು ಅವರು ಹೇಳಿದರು.
ಕಳೆದ ಐದು ತಿಂಗಳಿನಲ್ಲಿ ಈ ಸರಕಾರ ಏನು ಮಾಡಿತು ಎನ್ನುವುದು ಗೊತ್ತಿದೆ. ಸಿಎಂ, ಡಿಸಿಎಂ ಸೇರಿ ಎಲ್ಲಾ ಸಚಿವರು ನಾವು ವರ್ಗಾವಣೆಯಲ್ಲಿ 5 ತಿಂಗಳ ಸರ್ಕಾರದಲ್ಲಿ ಹಣ ತೆಗೆದುಕೊಂಡಿಲ್ಲ ಅಂತ ಆಣೆ ಮಾಡಲಿ. ಲೂಟಿ ಹೊಡೆದಿದ್ದೇ ಹೊಡೆದಿದ್ದು. ಇಡೀ ಜಗತ್ತಿಗೆ ಅದು ಗೊತ್ತಿದೆ. ನಮ್ಮ ಸರಕಾರ ಇದ್ದಾಗ ಪೊಲೀಸರ ವರ್ಗಾವಣೆ, ಎಂಜಿನಿಯರ್ ಗಳ ಬಡ್ತಿ ಸೇರಿ ಎಲ್ಲೂ ಒಂದು ರೂಪಾಯಿ ದಂಧೆ ನಡೆದಿಲ್ಲ. ನಾವು ಮಾಡಿಲ್ಲ ಎನ್ನುವ ಧೈರ್ಯ ಇವರಿಗೆ ಇದೆಯೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಯಾವತ್ತು ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿದವರಲ್ಲ. ನಾವು ಅಕ್ರಮವಾಗಿ ಹಣ ಸಂಪಾದನೆ ಮಾಡಿಲ್ಲ. ತಪ್ಪು ದಾರಿಯಲ್ಲಿ ಹಣ ಸಂಪಾದನೆ ಮಾಡಿಲ್ಲ. ತಪ್ಪಾಗಿ ಹಣ ಸಂಪಾದನೆ ಮಾಡಿದ್ದರೆ ರಾಜ್ಯ ಸರ್ಕಾರ ತನಿಖೆ ಮಾಡಿ ಅದನ್ನು ವಶಪಡಿಸಿಕೊಳ್ಳಲಿ ಎಂದರು ಅವರು.