- ನಾಯಿ ಬೊಗಳಿದರೆ ಆನೆ ತಲೆ ಕೆಡಿಸಿಕೊಳ್ಳಲ್ಲ
- ಸಿದ್ದರಾಮಯ್ಯ ಅವರದ್ದು ಯಾವ ಪಕ್ಷ? ʼಎಸ್ಎಫ್ʼ ಪಕ್ಷವೇ?
- ಡಿಕೆಶಿ ಸಿಎಂ ಆಗಲು ಸಿದ್ದರಾಮಯ್ಯ ಬಿಡೋದಿಲ್ಲ
- ಜಿಟಿ ದೇವೇಗೌಡರ ಬಗ್ಗೆ ಮಾಜಿ ಸಿಎಂ ಮಹತ್ವದ ಹೇಳಿಕೆ
- ಆರ್‌ಎಸ್‌ಎಸ್ ಬಗ್ಗೆ ಎತ್ತಿದ್ದ ಪ್ರಶ್ನೆಗಳಿಗಿನ್ನೂ ಉತ್ತರ ಸಿಕ್ಕಿಲ್ಲ
ಮೈಸೂರು:
ಆನೇ ಮುಂದೆ ಹೋಗ್ತಾ ಇದ್ದರೆ ಹಿಂದೆ ನಿಂತು ಬೊಗಳ್ತಾ ಇರುವ ನಾಯಿಯ ಬಗ್ಗೆ ಆ ಆನೆ ತಲೆ ಕೆಡಿಸಿಕೊಳ್ಳುತ್ತಾ? ಇಲ್ಲ..
ನಮ್ಮದೇನೋ ʼಜೆಡಿಎಫ್ʼ (ಜನತಾದಳ ಫ್ಯಾಮಿಲಿ) ಪಕ್ಷ. ಹಾಗಾದರೆ ನಿಮ್ಮದು ಯಾವ ಪಕ್ಷ? ʼಎಸ್ಎಫ್ʼ (ಸಿದ್ದರಾಮಯ್ಯ ಫ್ಯಾಮಿಲಿ) ಪಕ್ಷವೋ ಅಥವಾ ಕಾಂಗ್ರೆಸ್ ಪಕ್ಷವೋ? ತಿಳಿಸಿ.
ಹೀಗೆ ಏಕಕಾಲಕ್ಕೆ ಅತ್ತ ತಮ್ಮ ವಿರುದ್ಧ ಹರಕಲು ಬಾಯಿಯ ಟೀಕೆ ಮಾಡಿದ ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್ʼಗೂ, ಇತ್ತ ತಮ್ಮ ಕುಟುಂಬದ ಬಗ್ಗೆ ವಿನಾಕಾರಣ ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.
ಮೈಸೂರು ಪ್ರೆಸ್ ಕ್ಲಬ್ ಇಂದು ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾಜಿ ಮುಖ್ಯಮಂತ್ರಿಗಳು ಮಾತನಾಡಿದರು.
ಮಾರ್ಷಲ್‌ಗಳಿಗೆ ಹೇಳಿದ ಮಾತು ನೆನಪಿಸಿದ ಹೆಚ್‌ಡಿಕೆ
ಜಮೀರ್ ಅಹಮದ್ ಮಾಡಿರುವ ಆರೋಪದ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಅವರು ಹೇಳಿದ್ದಿಷ್ಟು;
ಅಂಥ ಹೊಣೆಗೇಡಿತನದ ಹೇಳಿಕೆಗೆ ನನ್ನಿಂದ ನೀವು (ಮಾಧ್ಯಮದವರು) ಪ್ರತಿಕ್ರಿಯೆ ಬಯಸುತ್ತೀರಾ? ನಾನು ಹಿಂದೆ ಬೆಂಗಳೂರಿನಲ್ಲಿ ನಾಲ್ಕು ವಾರ್ಡುಗಳಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆ ಪಡೆದಿದ್ದೆ. ಆಗ ನನ್ನ ತಂದೆಯವರು ಮಂತ್ರಿಯಾಗಿದ್ದರು. ಆಮೇಲೆ ಅದನ್ನು ತಂದೆಯವರ ಸೂಚನೆಯಂತೆ ಬಿಟ್ಟಿದ್ದು, ಆ ನಂತರ ತಂದೆಯವರ ನೆರಳಿನಿಂದ ಹೊರಬಂದು ಇದೇ ಮೈಸೂರಿನಲ್ಲಿ ಕಚೇರಿ ಮಾಡಿಕೊಂಡು ಬಡ್ಡಿಗೆ ತಂದ ಹಣದಿಂದ ಚಲನಚಿತ್ರಗಳನ್ನು ಖರೀದಿಸಿ ಹಂಚಿಕೆ ಮಾಡಿದ್ದು ಟೀಕಾಕಾರರಿಗೆ ಗೊತ್ತಾ?
ವಿಪಿ ಸಿಂಗ್ ಅವರ ಕಾಲದಲ್ಲಿ ಕಾವೇರಿ ನ್ಯಾಯ ಮಂಡಳಿ ರಚನೆಯಾಗಿ ಮಧ್ಯಂತರ ವರದಿ ಬಂದಾಗ ದೇವೇಗೌಡರು ಅದನ್ನು ವಿರೋಧಿಸಿ ಮೈಸೂರಿನಲ್ಲಿ ಸಮಾವೇಶ ಮಾಡಿದ್ದರು. ಹಿರಿಯ ನಾಯಕರಾದ ನಿಜಲಿಂಗಪ್ಪನವರು ಹಾಗೂ ಹಿರಿಯ ಕವಿ ಸಿದ್ದಯ್ಯ ಪುರಾಣಿಕರು ವೇದಿಕೆಯ ಮೇಲಿದ್ದರು. ಆ ಸಮಾವೇಶದ ವೆಚ್ಚಕ್ಕೆ ಹಣ ಹೊಂದಿಸಲು ನಾನು ಬಹಳ ಕಷ್ಟಪಟ್ಟೆ. ಆಗ ಸಿನಿಮಾ ವಿತರಣೆಯಿಂದ ಬಂದ ಎರಡು ಲಕ್ಷ ರೂ.ಗಳನ್ನು ಪೇಪರ್ʼನಲ್ಲಿ ಸುತ್ತಿಕೊಂಡು ಕಾರ್ಯಕರ್ತರಾದ ಶಿವಾನಂದ ಎಂಬುವವರಿಗೆ ಮನೆಗೇ ಹೋಗಿ ಕೊಟ್ಟಿದ್ದೆ. ಮಂಡ್ಯದಿಂದ ರೈತರನ್ನು ಸಭೆಗೆ ಕರೆಸಬೇಕಾಗಿತ್ತು. ಆ ಹಣ ನನ್ನ ಸ್ವಂತ ದುಡಿಮೆ ಆಗಿತ್ತು. ಅಂಥ ಹಿನ್ನೆಲೆಯುಳ್ಳ ನಮ್ಮ ಬಗ್ಗೆ, ನಮ್ಮ ಆರ್ಥಿಕ ಶಕ್ತಿಯ ಕುರಿತು ಹೇಳುವ ಹಾಗೂ ಸೂಟ್ ಕೇಸ್ ಬಗ್ಗೆ ಮಾತನಾಡಿದ ಆ ವ್ಯಕ್ತಿಗೆ ಇದೆಲ್ಲಾ ಗೊತ್ತಿದೆಯಾ?
ಇದೆಲ್ಲಾ ನಡೆದಾಗ ಅವರು ಎಲ್ಲಿದ್ದರು? 2003ನೇ ಇಸವಿಯಲ್ಲಿ ಅವರು ಎಲ್ಲಿದ್ದರು? 2004ರಲ್ಲಿ ನಾನು ಬೇಡವೆಂದರೂ ಜಯನಗರ ವಿಧಾಸಭೆ ಕ್ಷೇತ್ರದಲ್ಲಿ ನಿಂತು ಸೋತರು. ಆಗ ವಿಧಾನಸಭೆ ಕಲಾಪ ನಡೆಯುತ್ತಿದ್ದಾಗ ಬಂದ ಆ ವ್ಯಕ್ತಿಗೆ ಅಧ್ಯಕ್ಷರ ಪಾಸ್ ಇಲ್ಲ ಎನ್ನುವ ಕಾರಣಕ್ಕೆ ಮಾರ್ಷಲ್ʼಗಳು ಹೊರ ಹಾಕಿದ್ದರು. ಅಂದು ನಾನು ಆ ಮಾರ್ಷಲ್ʼಗಳಿಗೆ ಹೇಳಿದ್ದೆ. ಆ ಮಾರ್ಷಲ್ʼಗಳು ಇನ್ನೂ ಇದ್ದಾರೆ. ʼನೀವು ಯಾವ ವ್ಯಕ್ತಿಯನ್ನು ಪಾಸ್ ಇಲ್ಲವೆಂದು ಹೊರಗೆ ಹಾಕಿದ್ದಿರೋ ಅದೇ ವ್ಯಕ್ತಿಯನ್ನು ಶಾಸಕನನ್ನಾಗಿ ಆಯ್ಕೆ ಮಾಡಿಸಿಕೊಂಡು ಇದೇ ಸದನಕ್ಕೆ ಕರೆದುಕೊಂಡು ಬರುವೆʼ ಎಂದು ಚಾಲೆಂಜ್ ಮಾಡಿದ್ದೆ. ಆಮೇಲೆ ಏನಾಯಿತು? ಅದೇ ಸಿದ್ದರಾಮಯ್ಯ ಅವರ ವಿರೋಧದ ನಡುವೆಯೇ ʼಹರಿಕೆ ಕುರಿʼ ಎಂಬ ಮೂದಲಿಕೆಯ ಇದ್ದರೂ ಉಪ ಚುನಾವಣೆಯಲ್ಲಿ ನಮ್ಮಿಂದ ಗೆದ್ದು ಶಾಸಕನಾದ ಆ ಮನುಷ್ಯ ಇಂದು ನನ್ನ ಬಗ್ಗೆ, ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ.
ಸತ್ಯ ಏನೆಂಬುದು ಜನತೆಗೆ ಗೊತ್ತಿದೆ? ಅದನ್ನು ಆ ಚಾಮುಂಡೇಶ್ವರಿ ತಾಯಿಯೇ ನೋಡಿಕೊಳ್ಳುತ್ತಾರೆ. ಆತ ನಂಬುವ ಆ ʼಅಲ್ಲಾʼ ದೇವರೇ ನೋಡಿಕೊಳ್ಳುತ್ತಾರೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗೋದಿಲ್ಲ ಎಂದು ಹೆಚ್‌ಡಿಕೆ ಹೇಳಿದರು.
ನಿಮ್ಮದು ಯಾವ ಪಕ್ಷ ಸಿದ್ದರಾಮಯ್ಯನವರೇ?
ಜೆಡಿಎಸ್ ಪಕ್ಷವನ್ನು ʼಜೆಡಿಎಫ್ʼ (ಜನತಾದಳ ಫ್ಯಾಮಿಲಿ) ಎಂದು ಕರೆದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನೇರವಾಗಿ ತರಾಟೆಗೆ ತೆಗೆದುಕೊಂಡರು ಕುಮಾರಸ್ವಾಮಿ ಅವರು.
“ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯದಲ್ಲಿದ್ದ ನಿಮ್ಮ ಪುತ್ರರೊಬ್ಬರು ತೀರಿಕೊಂಡರು. ಅದು ಅತ್ಯಂತ ನೋವಿನ ಸಂಗತಿ. ಆಮೇಲೆ ರಾಜಕೀಯದಲ್ಲೇ ಇಲ್ಲದ, ಎಲ್ಲೋ ವೈದ್ಯ ವೃತ್ತಿ ಮಾಡಿಕೊಂಡಿದ್ದ ಹಾಗೂ ಕೊನೆಪಕ್ಷ ಪಂಚಾಯಿತಿ ಮೆಂಬರ್ ಕೂಡ ಆಗಿರದ ನಿಮ್ಮ ಇನ್ನೊಬ್ಬ ಪುತ್ರನನ್ನು ಕರೆದುಕೊಂಡು ಬಂದು ವರುಣಾ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟು ಶಾಸಕರನ್ನಾಗಿ ಮಾಡಿದಿರಿ.”
“ಅಷ್ಟಕ್ಕೆ ಸುಮ್ಮನಾದಿರಾ ನೀವು? ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಖಚಿತ ಎಂದು ಗೊತ್ತಾದ ಮೇಲೆ ಬಾದಾಮಿಯಿಂದಲೂ ಸ್ಪರ್ಧಿಸಿದಿರಿ. ಆಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ನೀವು ಬಾದಾಮಿಯಿಂದಲೇ ಸ್ಪರ್ಧೆ ಮಾಡಬಹುದಿತ್ತಲ್ಲವೆ? ಎರಡೂ ಕಡೆ ನಿಂತು ಒಂದು ಕಡೆ ಸೋತು ಇನ್ನೊಂದು ಕಡೆ ಗೆದ್ದಿರಿ.”
“ವರುಣಾ ಕ್ಷೇತ್ರದಲ್ಲಿ ನಿಮ್ಮ ಮಗನಿಗೆ ಏಕೆ ಟಿಕೆಟ್ ಕೊಡಿಸಿದಿರಿ? ಅಲ್ಲಿ ಕಾಂಗ್ರೆಸ್ ಪಕ್ಷದ ಬೇರೆ ಮುಖಂಡರೇ ಇರಲಿಲ್ಲವಾ? ನಿಷ್ಠಾವಂತ ಕಾರ್ಯಕರ್ತನೊಬ್ಬನಿಗೆ ಟಿಕೆಟ್ ಕೊಡಬಹುದಾಗಿತ್ತು, ಅಲ್ಲವೇ? ಪದೇಪದೆ ನೀವೇ ನಮಗೆ ಹೇಳುವಂತೆ ಅಲ್ಪಸಂಖ್ಯಾತ ಮುಖಂಡರೊಬ್ಬರಿಗೆ ಅವಕಾಶ ಕೊಡಬಹುದಾಗಿತ್ತಲ್ಲವೇ? ಹಾಗೆ ಯಾಕೆ ಮಾಡಲಿಲ್ಲ ಸಿದ್ದರಾಮಯ್ಯನವರೇ? ಹಾಗಾದರೆ, ನಿಮ್ಮದು ಕಾಂಗ್ರೆಸ್ ಪಕ್ಷವೋ ಅಥವಾ ಸಿದ್ದರಾಮಯ್ಯ ಫ್ಯಾಮಿಲಿಯ ʼಎಸ್ಎಫ್ʼ ಪಕ್ಷವೋ? ಉತ್ತರ ಹೇಳಿ” ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ಪ್ರತಿಪಕ್ಷ ನಾಯಕನಿಗೆ ಚಾಟಿ ಬೀಸಿದರು.
ಡಿಕೆಶಿ ಸಿಎಂ ಕನಸು ಈಡೇರಲ್ಲ
“ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಕಟ್ಟಿದ್ಹೇಗೆ ಎನ್ನುವುದು ನನಗೆ ಚನ್ನಾಗಿ ಗೊತ್ತಿದೆ. ನಾವು ಹಣ ಖರ್ಚು ಮಾಡಿ, ಡೇರೆ ಹೊಡೆದು, ಬ್ಯಾನರ್ ಬಾವುಟ ಕಟ್ಟಿ, ಕುರ್ಚಿ ಹಾಕಿ ಜನರನ್ನು ಸೇರಿಸಿದರೆ ಆಮೇಲೆ ಬಂದು ಈ ಮಹಾನುಭಾವರು ಭಾಷಣ ಹೊಡೆಯೋರು. ದೇವೇಗೌಡರ ಪಕ್ಕದಲ್ಲೇ ಕಾಲ ಮೇಲೆ ಕಾಲು ಹಾಕಿಕೊಂಡು ಕೂತು ಗೌಡರಿಗೇ ತಮ್ಮ ಚಪ್ಪಲಿಯನ್ನು ತಾಕಿಸುತ್ತಿದ್ದ ದೃಶ್ಯಗಳನ್ನು ನಾನಿನ್ನೂ ಮರೆತಿಲ್ಲ. ಅಂಥ ಅನೇಕ ಸಮಾವೇಶಗಳಿಗೆ ಹಗಲಿರಳೂ ದುಡಿಯುತ್ತಿದ್ದ ನಾವೆಲ್ಲ ವೇದಿಕೆಯ ಕೆಳಗೆ ಕೈಕಟ್ಟಿ ನಿಂತಿದ್ದರೆ ನಯಾಪೈಸೆ ಕೆಲಸ ಮಾಡದ ಸಿದ್ದರಾಮಯ್ಯ ವೇದಿಕೆಯ ಮೇಲೆ ಅಹಂನಿಂದ ಕೂತು ಎದ್ದು ಹೋಗುತ್ತಿದ್ದರು.”
“ಉತ್ತರಹಳ್ಳಿಯ ಶ್ರೀನಿವಾಸ್ ಅವರು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಂಡಾಗ ಎರಡು ಬ್ಯಾನರ್ʼಗಳಲ್ಲಿ ತಮ್ಮ ಫೋಟೋ ಇಲ್ಲವೆನ್ನುವ ಏಕೈಕ ಸಣ್ಣ ಕಾರಣಕ್ಕೆ ಅವರು ಸಮಾವೇಶವನ್ನೇ ಬಹಿಷ್ಕಾರ ಮಾಡಲು ಮುಂದಾಗಿದ್ದರು. ಇಂಥ ಅನುಭವಗಳು ನನಗೆ ಸಾಕಷ್ಟು ಆಗಿವೆ. ಕೇವಲ ಬ್ಯಾನರ್ʼನಲ್ಲೇ ಫೋಟೋ ಹಾಕಲಿಲ್ಲ ಎಂದು ಸಭೆಗೆ ಬಾರದೇ ದೂರ ಉಳಿಯುತ್ತಿದ್ದ ಸಿದ್ದರಾಮಯ್ಯ, ಇನ್ನು ಕಾಂಗ್ರೆಸ್ಸಿನಲ್ಲಿ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಲು ಬಿಡುತ್ತಾರಾ?” ಎಂದು ಹೆಚ್‌ಡಿಕೆ ಅವರು ಪ್ರಶ್ನೆ ಮಾಡಿದರು.
ಆರ್ ಎಸ್ ಎಸ್ ಬಗ್ಗೆ ಉತ್ತರ ಸಿಕ್ಕಿಲ್ಲ
“ಆರ್ ಎಸ್ ಎಸ್ ಬಗ್ಗೆ ನಾನು ಕೆಲ ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದೇನೆಯೇ ಹೊರತು ವೈಯಕ್ತಿಕವಾಗಿ ಯಾರನ್ನೂ ಗುರಿ ಮಾಡಲಿಲ್ಲ. ಆದರೆ, ಸಂಘದ ಬಗ್ಗೆ ನಾನು ಮಾತನಾಡಿದ್ದೇ ತಡ ನನ್ನ ಮೇಲೆ ವ್ಯಕ್ತಿಗತವಾಗಿ ಟೀಕೆ ಮಾಡಲು ಕೆಲವರು ಮುಂದಾದರು. ಆಗ ನಾನೂ ಅವರಿಗೆ ಸೂಕ್ತ ತಿರುಗೇಟು ನೀಡಿದ್ದೇನೆ.”
“ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರು ಕೆಲ ದಿನಗಳ ಹಿಂದೆ ಗುರುತರ ಆರೋಪ ಮಾಡಿದ್ದರು. ಎರಡು ಕಡತಗಳನ್ನು ವಿಲೇವಾರಿ ಮಾಡಿಸಲು ಆರ್ ಎಸ್ ಎಸ್ ಮುಖಂಡರೊಬ್ಬರು ಹಾಗೂ ಕೈಗಾರಿಕೋದ್ಯಮಿಯೊಬ್ಬರು ಸೇರಿ ನನಗೆ 300 ಕೋಟಿ ರೂ. ಲಂಚದ ಆಮಿಷ ಒಡ್ಡಿದ್ದರು ಎಂದು ಸ್ವತಃ ರಾಜ್ಯಪಾಲರೇ ಹೇಳಿದ್ದರು. ಇದೇನಾ ಆರ್ ಎಸ್ ಎಸ್ ಸೇವಾ ಹಿನ್ನೆಲೆ? ನಾನು ಇರುವ ವಾಸ್ತವ ಅಂಶಗಳನ್ನು ಜನರ ಮುಂದೆ ಇಟ್ಟಿದ್ದೇನೆಯೇ ಹೊರತು ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ಕುಮಾರಸ್ವಾಮಿ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಸರಿಯಲ್ಲ” ಎಂದು ಹೇಳಿದರು ಮಾಜಿ ಮುಖ್ಯಮಂತ್ರಿಗಳು.
ಸಿಂಧಗಿಯಲ್ಲಿ ಜೆಡಿಎಸ್ ಗೆಲ್ಲುತ್ತದೆ
ವಿಶೇಷವಾಗಿ ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪರ ಹೆಚ್ಚು ಒಲವಿದೆ. ಏಕೆಂದರೆ, ದೇವೇಗೌಡರು ಮುಖ್ಯಮಂತ್ರಿ-ಪ್ರಧಾನಮಂತ್ರಿ ಆಗಿದ್ದಾಗ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು, ಜಾರಿಗೆ ತಂದ ನೀರಾವರಿ ಯೋಜನೆಗಳು, ನಾನು ಮುಖ್ಯಮಂತ್ರಿ ಆಗಿದ್ದಾಗ ಹಮ್ಮಿಕೊಂಡ ಕಾರ್ಯಕ್ರಮಗಳು ಹಾಗೂ ಸಾಲ ಮನ್ನಾ ನಮ್ಮ ಪಕ್ಷದ ಕೈಹಿಡಿಯಲಿವೆ. ಮಿಗಿಲಾಗಿ ನಮ್ಮ ಪಕ್ಷಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕುಟುಂಬದ ಯಜಮಾನನ ಸೊಸೆ, ಎಂಎ ಪದವೀಧರೆ ನಾಜಿಯಾ ಅಂಗಡಿ ಅವರಿಗೆ ಟಿಕೆಟ್ ನೀಡಿದ್ದೇವೆ. ಇವೆಲ್ಲವೂ ಜೆಡಿಎಸ್ ಪಕ್ಷಕ್ಕಿರುವ ಗೆಲುವಿನ ಸಾಧ್ಯತೆಗಳು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಜಿಟಿ ದೇವೇಗೌಡರ ಬಗ್ಗೆ ಹೇಳಿದ್ದೇನು?
ಜಿಟಿ ದೇವೇಗೌಡರ ವಿಚಾರದಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ನನಗೆ ಇಲ್ಲ. ಅವರು ನನ್ನ ಸಂಪರ್ಕಕ್ಕೆ ಬಂದೇ ಎರಡೂವರೆ ವರ್ಷ ಆಗಿದೆ. ಕೆಲ ದಿನಗಳ ಹಿಂದೆ ನನ್ನ ಮಗ ಹಾಗೂ ಜಿಟಿ ದೇವೇಗೌಡರ ಪುತ್ರ ಸೇರಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಅವರಿಬ್ಬರ ಜತೆ ಪುಟ್ಟರಾಜು ಅವರ ಮಗ, ಪಿರಿಯಾಪಟ್ಟಣದ ಮಹಾದೇವ್ ಅವರ ಮಗ ಕೂಡ ಇದ್ದರು. ʼನಾವಿಬ್ಬರು ಸ್ನೇಹಿತರು, ಪರಸ್ಪರ ಭೇಟಿಯಾಗಿದ್ದೇವೆʼ ಎಂದು ನಿಖಿಲ್ ಹೇಳಿದ್ದಾರೆ. ಈ ಬಗ್ಗೆ ಅವರ ಮಟ್ಟದಲ್ಲಿ ಏನಾದರೂ ಮಾತುಕತೆ ನಡೆದಿದೆಯಾ ಎನ್ನುವುದು ನನಗೆ ಗೊತ್ತಿಲ್ಲ. ಒಂದು ವೇಳೆ ಈ ಎಲ್ಲ ಯುವ ಗೆಳೆಯರ ಮಟ್ಟದಲ್ಲಿ ಚರ್ಚೆಯಾಗಿ ಎಲ್ಲವೂ ಸರಿ ಹೋದರೆ ನನ್ನದೇನೂ ಅಭ್ಯಂತರವಿಲ್ಲ. ಏನ್ಮಾಡೋಕೆ ಆಗಲ್ಲ, ಒಮ್ಮೊಮ್ಮೆ ಮಕ್ಕಳ ಮಾತನ್ನೂ ಕೇಳಬೇಕಾಗುತ್ತದೆ ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.