ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ “ಆರೋಗ್ಯಕರ ಬೆಂಗಳೂರು” ವಿಷಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ
ಬೆಂಗಳೂರು:
ನಗರದ ನಾಗರಿಕರಿಗೆ ಅತ್ಯತ್ತುಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ರೀತಿಯ ಯೋಜನೆಗಳನ್ನು ಜಾರಿಗೊಳಿಸಿ ಅದನ್ನು ಅನುಷ್ಠಾನಕ್ಕೆ ತರಬೇಕೆಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಹಾಗೂ ಆರೋಗ್ಯಕರ ಬೆಂಗಳೂರಿನ ನೋಡಲ್ ಅಧಿಕಾರಿಯಾದ ಡಾ. ಕೆ.ವಿ ತ್ರಿಲೋಕ್ ಚಂದ್ರ ರವರು ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ “ಆರೋಗ್ಯಕರ ಬೆಂಗಳೂರು” ವಿಷಯಕ್ಕೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆಯ PMSSY(ಪ್ರಧಾನ ಮಂತ್ರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ಆಡಿಟೋರಿಯಂನಲ್ಲಿ ನಡೆದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ವಿಜ್ಞಾನ ಸಂಸ್ಥೆಯ ಆರ್ಟ್ ಪಾರ್ಕ್ ನ ಪಾಲುದಾರಿಕೆಯಲ್ಲಿ ಆರೋಗ್ಯಕರ ಬೆಂಗಳೂರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದಂತಹ ಸುಮಾರು 10,478 ಸಲಹೆಗಳನ್ನು ಅಧ್ಯಯನ ನಡೆಸಿ ಒಂದೇ ರೀತಿಯ ಸಲಹೆಗಳನ್ನು ತೆಗೆದ ನಂತರ ಒಟ್ಟಾರೆ 8059 ಸಲಹೆ/ಅಭಿಪ್ರಾಯಗಳನ್ನು ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಿ ವರದಿಯನ್ನು ಸಿದ್ದಪಡಿಸಲಾಗಿದ್ದು, ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿರುವ ನಾಗರಿಕರಿಗೆ ಸುಲಭವಾಗಿ ಆರೋಗ್ಯ ಸೇವೆ ಪಡೆಯಲು ಮತ್ತು ಅತ್ಯಂತ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಹೊಂದುವ ಹಾಗೆ ಮಾಡಬೇಕು. ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕರ ನಗರವನ್ನು ಸ್ಥಾಪಿಸುವ ಸಲುವಾಗಿ ನಾವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೆಕಿದೆ ಎಂದರು.
ಜನರ ಆರೋಗ್ಯದ ಜೊತೆಗೆ ಪ್ರಾಣಿಗಳ ಆರೋಗ್ಯವೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದ್ದು, ಎಲ್ಲಾ ರೀತಿಯ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಬೇಕು. ಸಾರ್ವಜನಿಕ ಆರೋಗ್ಯದ ವಿಚಾರವಾಗಿ ಕೋವಿಡ್ ನಂತಹ ತುರ್ತು ರೋಗಗಳನ್ನು ನಾವು ಎದುರಿಸುವ ನಿಟ್ಟಿನಲ್ಲಿ ಆರೋಗ್ಯ ಸೇವೆಯನ್ನು ಬಲಪಡಿಸಿಕೊಳ್ಳಬೇಕು ಎಂದು ಹೇಳಿದರು
ಪ್ರಾಥಮಿಕ ಆರೋಗ್ಯ ಘಟಕದಿಂದ ತೃತೀಯ ಸೇವೆ ನೀಡುತ್ತಿರುವ ಪ್ರಮುಖ ಆಸ್ಪತ್ರೆಗಳಿಗೆ ಇರುವ ಅಂತರವನ್ನು ಕಡಿಮೆ ಮಾಡಿ ನಾಗರಿಕರಿಗೆ ಸುಲಭ ರೀತಿಯಲ್ಲಿ ಆರೋಗ್ಯ ಸೇವೆ ಸಿಗುವಂತೆ ಮಾಡಬೇಕೆಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹೆರಿಗೆ ಆಸ್ಪತ್ರೆಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ನಗರದಲ್ಲಿ 232 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ನಾವು ಅದನ್ನು ಮತ್ತಷ್ಟು ಬಲಪಡಿಸಲು ಮತ್ತು ಕೆಲಸದ ಸಮಯವನ್ನು ಹೆಚ್ಚಿಸುವ ಉದ್ದೇಶದಿಂದ ಈಗಾಗಲೇ ಕೆಲ ಕ್ಲಿನಿಕ್ ಗಳಲ್ಲಿ 8 ರಿಂದ 8 ರವರೆಗೆ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕ್ಲಿನಿಕ್ ಗಳನ್ನು ಸಮಯವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಬೆಂಗಳೂರಿನ ಪ್ರಮುಖ ದ್ಯೇಯ:
- ಆರೋಗ್ಯ ಸೇವೆಯಲ್ಲಿ ಹೂಡಿಕೆಯನ್ನು ಹೆಚ್ಚಿಸುವುದು.
- ತುರ್ತು ಆರೋಗ್ಯ ಸೇವೆಗಳ ವ್ಯವಸ್ಥೆ.
- CSR ಪಾಲುದಾರರೊಂದಿಗೆ ಸಹಯೋಗ ಹೊಂದುವುದು.
- ಬೆಂಗಳೂರು ಆರೋಗ್ಯ ವ್ಯವಸ್ಥೆ ಜಾರಿಗೊಳಿಸುವುದು.
- ಒಂದು ಆರೋಗ್ಯ ವಿಧಾನ ಜಾರಿಗೊಳಿಸುವುದು.
- ವಾರ್ ರೂಮ್ ಮತ್ತು ಕಣ್ಗಾವಲು ವ್ಯವಸ್ಥೆಗಳ ವ್ಯವಸ್ಥೆ.
- ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಯೋಗಾಲಯ ಸೇವೆಗಳನ್ನು ಹೆಚ್ಚಿಸುವುದು.
- ಬೆಂಗಳೂರಿಗೆ ಆಂಟಿಮೈಕ್ರೊಬಿಯಲ್ ನೀತಿ ಜಾರಿತರುವುದು.
- ಹವಾಮಾನಕ್ಕನುಗುಣವಾಗಿ ಆರೋಗ್ಯ ವ್ಯವಸ್ಥೆ
- ಬೆಂಗಳೂರಿನಲ್ಲಿ ಪಶುವೈದ್ಯಕೀಯ ಆರೈಕೆ ವ್ಯವಸ್ಥೆ.
- ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಮನೆಯಲ್ಲಿಯೇ ಚಿಕಿತ್ಸೆಗೆ ಸಂಬಂಧಪಟ್ಟಂತಹ ಸಮಾಲೋಚನೆ ನಡೆಸುವ ವ್ಯವಸ್ಥೆಯನ್ನು ಜಾರಿಗೊಳಿಸುವುದು.
ಈ ವೇಳೆ ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ. ಬಾಲಸುಂದರ್, ಡಾ. ನಿರ್ಮಲಾ ಬುಗ್ಗಿ, ಭಾರತೀಯ ವಿಜ್ಞಾನ ಸಂಸ್ಥೆಯ ಆರ್ಟ್ ಪಾರ್ಕ್ ನ ಆರೋಗ್ಯ ನಿರ್ದೇಶಕ ಡಾ. ಭಾಸ್ಕರ್ ರಾಜ್ ಕುಮಾರ್, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ತಜ್ಞರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.