ಬೆಂಗಳೂರು: ನಗರದ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ, 29 ವರ್ಷದ ಮಹಿಳೆಯೊಬ್ಬರು ತಮ್ಮ ನಾಲ್ಕು ವರ್ಷದ ಮಗಳನ್ನು ಬೆಂಕಿಹಚ್ಚಿ ಕೊಂದು, ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ದೀರ್ಘಕಾಲದ ದಾಂಪತ್ಯ ಕಲಹ ಮತ್ತು ಗಂಡನ ನಿರ್ಲಕ್ಷ್ಯದ ಹಿನ್ನೆಲೆಯಲ್ಲೇ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮೃತರನ್ನು ಸೀತಾ ಅಲಿಯಾಸ್ ಮನೀಷಾ (29) ಹಾಗೂ ಆಕೆಯ ಮಗಳು ಸೃಷ್ಟಿ (4) ಎಂದು ಗುರುತಿಸಲಾಗಿದೆ. ಇವರು ಇಬ್ಬರೂ ನೇಪಾಳ ಮೂಲದವರಾಗಿದ್ದಾರೆ. ಘಟನೆ ಜನವರಿ 15ರಂದು ರಾತ್ರಿ ಸುಮಾರು 8.30ರ ವೇಳೆಗೆ ಕೃಷ್ಣಪ್ಪ ಗಾರ್ಡನ್ನಲ್ಲಿರುವ ಬಾಡಿಗೆ ಮನೆಯಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಸೀತಾ ಮತ್ತು ಆಕೆಯ ಗಂಡ ಗೋವಿಂದ ಬಹದ್ದೂರು ಸುಮಾರು ಎಂಟು ತಿಂಗಳ ಹಿಂದೆ ಬೆಂಗಳೂರಿಗೆ ವಲಸೆ ಬಂದಿದ್ದರು. ಕೆಲ ತಿಂಗಳ ಹಿಂದೆ ಗೋವಿಂದ ನೇಪಾಳಕ್ಕೆ ತೆರಳಿದ್ದು, ಮರುಬರಲಿಲ್ಲ. ಮನೆಗೆ ವಾಪಸ್ ಬರಬೇಕೆಂದು ಸೀತಾ ಅನೇಕ ಬಾರಿ ಕರೆಮಾಡಿ ಮನವಿ ಮಾಡಿದರೂ, ಆತ ನಿರಾಕರಿಸಿ ಫೋನ್ ಮೂಲಕ ಜಗಳವಾಡುತ್ತಿದ್ದನೆಂದು ಹೇಳಲಾಗಿದೆ.
ಒಂಟಿಯಾಗಿ ಮಗಳನ್ನು ಸಾಕುವ ಹೊಣೆ ಹೊತ್ತಿದ್ದ ಸೀತಾ, ಮನೆಯ ಸಮೀಪದಲ್ಲೇ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಗಂಡನಿಂದ ಯಾವುದೇ ಸಹಕಾರ ಸಿಗದೆ, ಆರ್ಥಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎನ್ನಲಾಗಿದೆ. ಘಟನೆ ನಡೆದ ದಿನವೂ ಸಹ ಗಂಡನಿಗೆ ಕರೆ ಮಾಡಿ ಮರಳುವಂತೆ ಬೇಡಿಕೊಂಡಾಗ, ಅವಮಾನಕಾರಿ ಮಾತುಗಳಿಂದ ಆಕೆ ಮತ್ತಷ್ಟು ಮನನೊಂದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ರಾತ್ರಿ ಪೆಟ್ರೋಲ್ ತರಿಸಿಕೊಂಡು ಮನೆ ಬಾಗಿಲು ಹಾಕಿಕೊಂಡ ಸೀತಾ, ಮೊದಲು ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಂದು, ನಂತರ ತಾವೂ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹೊಗೆಯ ವಾಸನೆ ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ತಾಯಿ–ಮಗಳು ಸಜೀವ ದಹನಗೊಂಡಿರುವುದು ಪತ್ತೆಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಿಳೆಯ ಮೊಬೈಲ್ ಫೋನ್ ಸೇರಿದಂತೆ ಕೆಲವು ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಮಾನಸಿಕ ಸಹಾಯ ಮಾಹಿತಿ
ಆತ್ಮಹತ್ಯೆಯ ಯೋಚನೆ ಬಂದಾಗ ಅಥವಾ ತೀವ್ರ ಮಾನಸಿಕ ಒತ್ತಡ ಅನುಭವಿಸುತ್ತಿರುವವರು ಸಹಾಯ ಪಡೆಯಬಹುದು:
- ರಾಜ್ಯ ಆರೋಗ್ಯ ಇಲಾಖೆ ಹೆಲ್ಪ್ಲೈನ್: 104
- Tele-MANAS ಮಾನಸಿಕ ಆರೋಗ್ಯ ಸಹಾಯವಾಣಿ: 14416
