ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಪೂರ್ವಭಾವಿಯಲ್ಲಿ ಬೆಂಗಳೂರು ಕೆ.ಆರ್. ಮಾರ್ಕೆಟ್‌ನಲ್ಲಿ ಹಬ್ಬದ ಖರೀದಿಗೆ ಬಂದ ಸಾವಿರಾರು ನಾಗರಿಕರು ಭಾರೀ ಗುಂಪು ಸೇರಿರುವುದರಿಂದ ಸ್ಥಳದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಹೂವು, ಹಣ್ಣು, ಬಾಳೆದಿಂಡು, ಮಾವಿನ ಎಲೆ ಮತ್ತು ಪೂಜೆ ಸಾಮಗ್ರಿಗಳ ಖರೀದಿಗೆ ಭರಾಟೆ ನಡೆಯುತ್ತಿದ್ದು, ನಿಯಂತ್ರಣವಿಲ್ಲದ ವಾಹನ ಪಾರ್ಕಿಂಗ್ ಇಡೀ ವ್ಯಾಪ್ತಿಯ ವಾಹನ ಸಂಚಾರವನ್ನು ಅಸ್ತವ್ಯಸ್ತಗೊಳಿಸಿದೆ.

ಕೆಆರ್ ಮಾರ್ಕೆಟ್ ಫ್ಲೈಓವರ್, ಕಲಾಸಿಪಾಳ್ಯ ರಸ್ತೆ, ಜೆಸಿ ರಸ್ತೆ, ಕಾರ್ಪೊರೇಷನ್ ಸರ್ಕಲ್, ಮೈಸೂರುರೋಡ್, ಮತ್ತು ಟೌನ್ ಹಾಲ್ ಭಾಗಗಳಲ್ಲಿ ವಾಹನಗಳು ಅಡ್ಡಲಾಗಿ ನಿಂತು ಸಂಚಾರ ದಟ್ಟಣೆಗೆ ಕಾರಣವಾಗಿವೆ. ಕೆಲ ವಾಹನ ಸವಾರರು ತಮ್ಮ ಬೈಕ್‌ಗಳು ಮತ್ತು ಕಾರುಗಳನ್ನು ರಸ್ತೆಯ ಮಧ್ಯದಲ್ಲೇ ಪಾರ್ಕ್ ಮಾಡಿರುವುದು ಬಿಎಂಟಿಸಿ ಬಸ್ಸುಗಳು ಕೂಡ ಸಾಗಲಾರದ ಪರಿಸ್ಥಿತಿ ನಿರ್ಮಾಣಿಸಿದೆ.
ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಹಬ್ಬದ ಗಳಿಕೆಗೆ ಹೆಚ್ಚಿನ ಹೂವು, ಹಣ್ಣು ಮತ್ತು ಬಾಳೆದಿಂಡುಗಳನ್ನು ತಂದಿದ್ದು, ಬೆಲೆ ಗಗನಕ್ಕೇರಿದರೂ ಖರೀದಿದಾರರ ಉತ್ಸಾಹ ಕುಂದಿಲ್ಲ. ಹೂವಿನ ಬೆಲೆ ಹೆಚ್ಚಾದರೂ ಜನರು ಸಾಲಿನಲ್ಲಿ ನಿಂತು ಖರೀದಿ ನಡೆಸಿದ್ದಾರೆ.


ಇನ್ನುಳಿದಂತೆ, ಸಾರ್ವಜನಿಕರು ಮತ್ತು ವಾಹನ ಸವಾರರು ಟ್ರಾಫಿಕ್ ನಿಯಂತ್ರಣದ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸ್ಥಳದಲ್ಲಿ ಟ್ರಾಫಿಕ್ ಪೊಲೀಸರ ಹಾಜರಾತಿ ಕಡಿಮೆ ಎಂದು ಟೀಕಿಸಿದ್ದಾರೆ. ಹಬ್ಬದ ದಿನಗಳಲ್ಲಿ ಈ ಭಾಗದಲ್ಲಿ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸುವಂತೆ, ಅಥವಾ ಮೆಟ್ರೋ ಪ್ರಯಾಣಕ್ಕೆ ಉತ್ತೇಜನ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಪಾದಚಾರಿ ಸೌಲಭ್ಯ, ಟೋವಿಂಗ್ ವ್ಯವಸ್ಥೆ, ಮತ್ತು ವಾಹನ ಪಾರ್ಕಿಂಗ್ ನಿಯಮಗಳು ಕಠಿಣವಾಗಿ ಜಾರಿಗೆ ತರಬೇಕೆಂಬ ಜನಾಭಿಪ್ರಾಯವೂ ವ್ಯಕ್ತವಾಗಿದೆ.