ಬೆಂಗಳೂರು: 2024ರಲ್ಲಿ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಯಡಿಯೂರಪ್ಪ ಹಾಗೂ ಇನ್ನಿತರ ಆರೋಪಿಗಳಿಗೆ ಫಾಸ್ಟ್–ಟ್ರಾಕ್ ನ್ಯಾಯಾಲಯ ನೀಡಿದ್ದ ಸಮನ್ಸ್ ರದ್ದುಪಡಿಸುವಂತೆ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ ಈ ಪ್ರಕರಣದಲ್ಲಿ ಕಾಗ್ನೈಜೆನ್ಸ್ ಮತ್ತು ಸಮನ್ಸ್ ಸರಿಯೇ ಇದೆ ಎಂದು ಹೇಳಿದೆ. ಜೊತೆಗೆ, ಯಡಿಯೂರಪ್ಪ ಅವರಿಗೆ ಪ್ರತೀ ಬಾರಿ ಕಡ್ಡಾಯವಾಗಿ ಹಾಜರಾಗುವ ಅಗತ್ಯವಿಲ್ಲದ ಸಂದರ್ಭಗಳಲ್ಲಿ ಕುದ್ದು ಹಾಜರಿಯಿಂದ ವಿನಾಯಿತಿ ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಟ್ರಯಲ್ ಕೋರ್ಟ್ ಅಂತಹ ಮನವಿಗಳನ್ನು ಪರಿಗಣಿಸಲು ಹೈಕೋರ್ಟ್ ಸೂಚನೆ ನೀಡಿದೆ.
ಈ ಪ್ರಕರಣದಲ್ಲಿ ಯಡಿಯೂರಪ್ಪ ಸೇರಿದಂತೆ ಮೂವರಿಗೆ ಸಾಕ್ಷ್ಯ ನಾಶ ಮಾಡಿದ ಪ್ರಕರಣದಲ್ಲಿಯೂ ಆರೋಪ ಹೂಡಲಾಗಿದ್ದು, ಎಲ್ಲರಿಗೂ ಫೆಬ್ರವರಿ 28ರಂದು ಸಮನ್ಸ್ ಜಾರಿಯಾಗಿತ್ತು. ಈ ಸಮನ್ಸ್ನ್ನು ಪ್ರಶ್ನಿಸಿ ಎಲ್ಲರೂ ಹೈಕೋರ್ಟ್ ಗೆ ಬಂದಿದ್ದರು. ಆದರೆ ಹೈಕೋರ್ಟ್ ಈಗ ಸಮನ್ಸ್ ರದ್ದುಪಡಿಸಲು ನಿರಾಕರಿಸಿದೆ.
ಹೀಗಾಗಿ ಫಾಸ್ಟ್–ಟ್ರಾಕ್ ಕೋರ್ಟ್ ಈಗ ಹೊಸ ದಿನಾಂಕ ನಿಗದಿ ಮಾಡಿ ಮತ್ತೆ ಸಮನ್ಸ್ ಜಾರಿಗೊಳಿಸಲಿದೆ. ಹೊಸ ದಿನಾಂಕ ಬಂದ ನಂತರ ಯಡಿಯೂರಪ್ಪ ಅತ್ಯಾವಶ್ಯಕ ವಿಚಾರಣಾ ಹಂತಗಳಲ್ಲಿ ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ.
ಈ ಪ್ರಕರಣ ಕಳೆದ ಒಂದೂವರೆ ವರ್ಷಗಳಿಂದ ನ್ಯಾಯಾಲಯದಲ್ಲಿ ನಡೀತಿದ್ದು, ಈಗ ಚಾರ್ಜ್ಶೀಟ್ ಕೂಡ ಸಲ್ಲಿಕೆಯಾಗಿರುವುದರಿಂದ ಟ್ರಯಲ್ ಪ್ರಾರಂಭವಾಗುವ ಸಾಧ್ಯತೆ ಹೆಚ್ಚು. ತ್ವರಿತಗತಿ ನ್ಯಾಯಾಲಯವಿರುವುದರಿಂದ ತೀರ್ಪು ಕೂಡ ವೇಗವಾಗಿ ಬರುವ ಸಾಧ್ಯತೆ ಇದೆ ಎಂದು ಕಾನೂನು ವಲಯದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಪೊಕ್ಸೊ ಪ್ರಕರಣದಲ್ಲಿ ಯಡಿಯೂರಪ್ಪ ಈಗ ಗಂಭೀರ ಕಾನೂನು ಸವಾಲಿನ ಹಂತವನ್ನು ಎದುರಿಸುತ್ತಿದ್ದಾರೆ.
