
ಬೆಂಗಳೂರು: ಚುನಾವಣಾ ಅಕ್ರಮ ಪ್ರಕರಣಗಳಲ್ಲಿ ಕೆಲ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದೋಷಪೂರಿತ ಆರೋಪಪಟ್ಟಿ ಸಲ್ಲಿಸುತ್ತಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಧಿಕಾರಿಗಳು ಕಾನೂನಿಗಿಂತಲೂ ತಮ್ಮ ಭದ್ರತೆಯ ಕುರಿತಾಗಿ ಹೆಚ್ಚು ಚಿಂತಿಸುತ್ತಿದ್ದಾರೆ ಎಂದು ನ್ಯಾಯಾಲಯ ಕಿಡಿಕಾರಿದೆ.
ಹೈಕೋರ್ಟ್ನ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ವೇಳೆ ಈ ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಪ್ರಕರಣ ಕಳೆದ ವಿಧಾನಸಭೆ ಚುನಾವಣೆಯ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆರೋಪಕ್ಕೆ ಸಂಬಂಧಪಟ್ಟಿತ್ತು.
“ಅಧಿಕಾರಿಗಳು ತಪ್ಪಾದರೂ ಪ್ರಕರಣ ದಾಖಲಿಸುತ್ತಾರೆ, ಅದು ವಿಫಲವಾದರೂ ಪರವಾಗಿಲ್ಲ ಎನ್ನುವ ಧೋರಣೆ ಬೆಳೆಸಿಕೊಂಡಿದ್ದಾರೆ. ತಮ್ಮ ಮೇಲೆ ಕ್ರಮ ಜರುಗದಿರಲಿ ಎಂಬ ಭಯದಿಂದಲೇ ಅವರು ಇಂತಹ ಕ್ರಮ ಕೈಗೊಳ್ಳುತ್ತಾರೆ. ಇದು ತಪ್ಪು ಮತ್ತು ಕಾನೂನು ಪ್ರಕ್ರಿಯೆಗೆ ವಿರುದ್ಧ,” ಎಂದು ನ್ಯಾಯಾಲಯ ಟೀಕಿಸಿತು.
ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಪ್ರತಾಪ್ ಸಿಂಹ ಅವರ ವಿರುದ್ಧ ದಾಖಲಾಗಿದ್ದ ಆರೋಪಗಳು ಐಪಿಸಿ ಸೆಕ್ಷನ್ 171ಎಚ್ (ಚುನಾವಣೆಗೆ ಸಂಬಂಧಿಸಿದ ಅಕ್ರಮ ಹಣ ಪಾವತಿ) ಅಡಿಗೆ ಬರುವಂತಿಲ್ಲ. ಬದಲಿಗೆ, ಅದು ಐಪಿಸಿ ಸೆಕ್ಷನ್ 188 (ಸರ್ಕಾರಿ ಆದೇಶ ಉಲ್ಲಂಘನೆ) ಅಡಿಗೆ ಬರುವಂತದ್ದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಾಗಿ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಅಧಿಕಾರಿಗಳ ನಡೆಗೆ ಕೋರ್ಟ್ ಕಿಡಿ
“ಅಧಿಕಾರಿಗಳು ಐಪಿಸಿ ಸೆಕ್ಷನ್ಗಳ ಮೂಲಭೂತ ವ್ಯತ್ಯಾಸವನ್ನೇ ಅರಿಯದೇ ಆರೋಪಪಟ್ಟಿ ಸಲ್ಲಿಸುತ್ತಿದ್ದಾರೆ. ಕೆಲ ಪ್ರಮುಖರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪಾದ ಆರೋಪಪಟ್ಟಿ ಸಲ್ಲಿಸುವ ಮೂಲಕ ನ್ಯಾಯಾಲಯವೇ ಪ್ರಕರಣ ರದ್ದುಪಡಿಸಿದಂತೆ ತೋರ್ಪಡಿಸಲು ಪ್ರಯತ್ನಿಸುತ್ತಾರೆ. ಇಂಥಾ ನಡೆಯನ್ನು ನಿಲ್ಲಿಸಬೇಕು,” ಎಂದು ನ್ಯಾಯಾಲಯ ಎಚ್ಚರಿಸಿದೆ.
ರಾಜ್ಯ ಪರ ಹಾಜರಾಗಿದ್ದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ಸಹ ಅಧಿಕಾರಿಗಳು ತಪ್ಪಾಗಿ ಸೆಕ್ಷನ್ 171ಎಚ್ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಒಪ್ಪಿಕೊಂಡರು. “ಇಂಥಾ ತಪ್ಪುಗಳು ಮರುಕಳಿಸದಂತೆ ನ್ಯಾಯಾಲಯವು ಕಠಿಣ ಅಭಿಪ್ರಾಯ ವ್ಯಕ್ತಪಡಿಸಬೇಕು,” ಎಂದು ಅವರು ಕೋರಿದರು.
ಪ್ರಕರಣದ ಹಿನ್ನೆಲೆ
ಕಳೆದ ವಿಧಾನಸಭೆ ಚುನಾವಣೆಯ ವೇಳೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ರಂಗಸಮುದ್ರದ ಸಮೀಪ ಪ್ರತಾಪ್ ಸಿಂಹ ಮತ್ತು ಅವರ ಪಕ್ಷದ ನಾಯಕರು ಬೈಕ್ ರ್ಯಾಲಿ ನಡೆಸಿದ್ದರು. ಈ ರ್ಯಾಲಿಗೆ ಯಾವುದೇ ಅಧಿಕೃತ ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 171ಎಚ್ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಹೈಕೋರ್ಟ್ ಈ ಪ್ರಕರಣವನ್ನು ರದ್ದುಪಡಿಸಿದೆ.