Home ರಾಜಕೀಯ ವಿಜಯನಗರ ಜಿಲ್ಲೆಗೆ ಹೊಸಪೇಟೆ ಜಿಲ್ಲಾಆಡಳಿತ ಕೇಂದ್ರವಾಗಲಿದೆ

ವಿಜಯನಗರ ಜಿಲ್ಲೆಗೆ ಹೊಸಪೇಟೆ ಜಿಲ್ಲಾಆಡಳಿತ ಕೇಂದ್ರವಾಗಲಿದೆ

140
0

ಬೆಂಗಳೂರು:

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆಯನ್ನು ರಚಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿಂದು ಈ ತೀರ್ಮಾನ ಕೈಗೊಳ್ಳಲಾಗಿದೆ.

ಈ ಮೂಲಕ ರಾಜ್ಯದಲ್ಲಿ ಜಿಲ್ಲೆಗಳ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ. ವಿಜಯನಗರ ಜಿಲ್ಲೆಗೆ ಹೊಸಪೇಟೆ ಜಿಲ್ಲಾ ಆಡಳಿತ ಕೇಂದ್ರವಾಗಲಿದ್ದು, ಹರಪ್ಪನಹಳ್ಳಿ, ಹೂವಿನಹಡಗಲಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು ಮತ್ತು ಕೂಡ್ಲಗಿ ತಾಲೂಕುಗಳನ್ನು ಈ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಉಳಿದ ತಾಲೂಕುಗಳು ಬಳ್ಳಾರಿ ಜಿಲ್ಲೆಯಲ್ಲೇ ಇರಲಿದೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಕಾನೂನು ಪ್ರಕಾರ ಕ್ಷೇತ್ರಗಳ ಪುನರ್ ವಿಂಗಡನೆಗೆ ಅಧಿಸೂಚನೆ ಹೊರಡಿಸಿ, ಆಕ್ಷೇಪಣೆ ಕರೆದು, ನಂತರ ಜಿಲ್ಲಾ ಗಡಿ ನಿರ್ಧರಿಸುವುದಾಗಿ ತಿಳಿಸಿದರು.

ವಿಧಾನ ಮಂಡಲದಲ್ಲಿ ಇದೀಗ ಅಸ್ತಿತ್ವದಲ್ಲಿರುವ ವಿಶೇಷ ಮಂಡಳಿಯನ್ನು ವಿಭಜಿಸಿದ್ದು, ವಿಧಾನಸಭೆ ಜವಾಬ್ದಾರಿಯನ್ನು ಸಭಾಧ್ಯಕ್ಷರಿಗೆ ಹಾಗೂ ವಿಧಾನಪರಿಷತ್ತಿನ ಉಸ್ತುವಾರಿಯನ್ನು ಸಭಾಪತಿ ಅವರಿಗೆ ನೀಡಲು ತೀರ್ಮಾನಿಸಲಾಗಿದೆ.

ಕರ್ನಾಟಕ ಗೃಹ ಮಂಡಳಿಯಿಂದ 89 ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲು 7 ಸಾವಿರದ 232 ಕೋಟಿ ರೂಪಾಯಿ ಮೊತ್ತದ ಪ್ರಸ್ತಾವನೆಗೆ ಅಂಗೀಕಾರ ನೀಡಲಾಗಿದ್ದು, ಪರಿಶಿಷ್ಟ ಪಂಗಡದ ಬ್ಲಾಕ್ ಲಾಗ್ ಹುದ್ದೆಗಳ ನೇಮಕಾತಿಗಾಗಿ ಸಚಿವ ಬಿ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸುವ ಜೊತೆಗೆ ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿ ಹೋಟಾ ಸಮಿತಿ ಶಿಫಾರಸ್ಸಿನ ಅನ್ವಯ ಅನುಪಾತ ಪ್ರಮಾಣವನ್ನು 1: 20ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಮಸ್ಕಿ ನಾಲಾ ಆಧುನೀಕರಣ ಜೊತೆಗೆ ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಯ 220 ಕೋಟಿ ರೂಪಾಯಿ ಕಾಮಗಾರಿ ಅಂದಾಜು ಮೊತ್ತವನ್ನು ಪರಿಷ್ಕರಿಸಿ 284 ಕೋಟಿ ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಕೃಷಿ ಮಾರುಕಟ್ಟೆ ವಲಯದಲ್ಲಿ ಗೋದಾಮುಗಳ ನಿರ್ಮಾಣಕ್ಕೆ 39.37 ಕೋಟಿ ರೂಪಾಯಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, ಬಳ್ಳಾರಿಯ ಜಿಂದಾಲ್ ಕಾರ್ಖಾನೆಗೆ 2 ಸಾವಿರ ಎಕರೆ ಭೂಮಿ ನೀಡುವ ಕುರಿತು ಮತ್ತೊಮ್ಮೆ ಪರಿಶೀಲನೆ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

LEAVE A REPLY

Please enter your comment!
Please enter your name here