ಬೆಂಗಳೂರು: ಬೆಂಗಳೂರಿನ ಹೊರವಲಯದ ಹೊಸಕೋಟೆ ಸಮೀಪ ಬೆಳಗಿನ ಜಾವ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಕ್ಯಾಂಟರ್ ವಾಹನದ ಆಕ್ಸಲ್ ಮುರಿದು ನಿಯಂತ್ರಣ ತಪ್ಪಿದ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಚಲಿಸುತ್ತಿದ್ದ ಕ್ಯಾಂಟರ್ನ ಆಕ್ಸಲ್ ಕಟ್ ಆಗಿ ವಾಹನ ಪಲ್ಟಿಯಾದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಎಕ್ಸ್ಯೂವಿ700 ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಅಷ್ಟು ಭೀಕರವಾಗಿತ್ತು ಎಂದು ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಬೈಕ್ ಸವಾರನೂ ನಿಯಂತ್ರಣ ತಪ್ಪಿ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ. ಮತ್ತೊಂದು ಕಾರಿಗೂ ಸಣ್ಣಪುಟ್ಟ ಹಾನಿಯಾಗಿದ್ದು, ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳದ ದೃಶ್ಯಾವಳಿಗಳಲ್ಲಿ ಎಕ್ಸ್ಯೂವಿ700 ಸಂಪೂರ್ಣ ನಜ್ಜುಗುಜ್ಜಾಗಿರುವುದು ಕಾಣಿಸಿಕೊಂಡಿದೆ. ವಾಹನಗಳ ವೇಗ ಹಾಗೂ ಕ್ಯಾಂಟರ್ನ ಯಾಂತ್ರಿಕ ದೋಷ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೃತರು ಕೋಲಾರ ಜಿಲ್ಲೆಯವರು ಎಂದು ತಿಳಿದುಬಂದಿದ್ದು, ದೇವನಹಳ್ಳಿಯತ್ತ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮೃತದೇಹಗಳನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತದೆ.
ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾಂಟರ್ನ ಯಾಂತ್ರಿಕ ಸ್ಥಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರೆದಿದೆ.


ಈ ದುರಂತವು ಕರ್ನಾಟಕದ ಹೈವೇಗಳಲ್ಲಿ ವಾಹನಗಳ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆ ಎಬ್ಬಿಸಿದೆ.
