ಹೊಸಪೇಟೆ:
ದೇವಸ್ಥಾನಕ್ಕೆ ಹೋಗಿ ಮನೆಗೆ ಹಿಂತಿರುಗುವಾಗ ಈ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 7 ಜನರು ಮೃತಪಟ್ಟ ಘಟನೆ ನಡೆದಿದೆ.
ಹೊಸಪೇಟೆ ತಾಲೂಕಿನ ವ್ಯಾಸನಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ -50ರಲ್ಲಿ ಸಂಜೆ 4 ಗಂಟೆ ಸುಮಾರಿಗೆ ಜರುಗಿದೆ. ಮೃತ ಪಟ್ಟವರೆಲ್ಲರೂ ಹೊಸಪೇಟೆ ಉಕ್ಕಡಕೇರಿ ನಿವಾಸಿಗಳೆಂದು ತಿಳಿದು ಬಂದಿದೆ. ಕ್ರೂಸರ್ ನಲ್ಲಿ ಜವಳ ಕಾರ್ಯಕ್ಕೆಂದು ಹರಪನಹಳ್ಳಿ ಸಮೀಪದ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬರುವಾಗ ದುರ್ವಿಧಿ ಹೊಂಚು ಹಾಕಿ ಕೂತಂತಿದೆ.
ಮೃತಪಟ್ಟವರನ್ನು ಉಮಾ(45), ಕೆಂಚವ್ವ(80), ಭಾಗ್ಯ( 32), ಅನಿಲ್(30), ಗೋಣಿಬಸಪ್ಪ(65), ಯುವರಾಜ(4), ಭೀಮಲಿಂಗ(50), ಲಾರಿ ಚಾಲಕ ಚಿಕಿತ್ಸೆಗಾಗಿ ತೆರಳುವಾಗ ಮಾರ್ಗ ಮದ್ಯೆ ಅನಿಲ್(30) ಮೃತ ಎಂದು ಗುರುತಿಸಲಾಗಿದೆ.

ಮೈನ್ಸ್ ಟಿಪ್ಪರ್ ಹೊಸಪೇಟೆಯಿಂದ ಮರಿಯಮ್ಮನಹಳ್ಳಿ ಕಡೆ ಬರುವಾಗ ಒನ್ ವೇನಲ್ಲಿದ್ದರೂ ತಾಂತ್ರಿಕ ದೋಷದಿಂದ ರಸ್ತೆ ತಪ್ಪಿ ಪಕ್ಕದರಸ್ತೆಗೆ ಬಂದು ಕ್ರೂಸರ್ ಗೆ ಡಿಕ್ಕಿ ಹೊಡೆದಿದೆ. ಕ್ರೂಸರ್ ಹಿಂದೆ ಮತ್ತೊಂದು ಲಾರಿ ಬರುತ್ತಿದೆ. ಎರಡು ಲಾರಿಗಳ ಮಧ್ಯೆ ಸಿಕ್ಕಿ ಕೊಂಡ ಕ್ರೂಸರ್ ವಾಹನ ನುಜ್ಜುಗುಜ್ಜಾಗಿದೆ. ಅದರಲ್ಲಿದ್ದ 13 ಜನರ ಪೈಕಿ 7 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉಳಿದಂತೆ ತೀವ್ರವಾಗಿ ಗಾಯಗೊಂಡವರನ್ನು ಹೊಸಪೇಟೆಯ ಆಸ್ಪತ್ರೆಗೆ ರವಾನಿಸಲಾಗಿದೆ. ವಿಜಯನಗರ ಜಿಲ್ಲೆಯ ಎಸ್.ಪಿ. ಶ್ರೀಹರಿಬಾಬು ಇಲಾಖೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಿಕೊಡುವಲ್ಲಿ ನಿರತರಾಗಿದ್ದರು.