ಬೆಂಗಳೂರು:
ತಡರಾತ್ರಿ 1.00 ಗಂಟೆಯವರೆಗೆ ಎಲ್ಲಾ ಹೊಟೇಲು, ಬೇಕರಿ, ಸ್ವೀಟ್ ಸ್ಟಾಲ್ ಹಾಗೂ ಐಸ್ ಕ್ರೀಂ ಪಾರ್ಲರ್ ಗಳನ್ನು 24/7 ತೆರೆದಿರಲು ಅವಕಾಶ ನೀಡುವಂತೆ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ (ಬಿಬಿಎಚ್ಎ) ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರಿಗೆ ಪತ್ರ ಬರೆದಿದೆ.
ಹೋಟೆಲ್ ಅಸೋಸಿಯೇಷನ್ ರೆಸ್ಟೋರೆಂಟ್‌ಗಳು 24/7 ತೆರೆದಿರಲು ಅವಕಾಶ ನೀಡುವಂತೆ ನಗರ ಪೊಲೀಸರಿಗೆ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರವನ್ನು ವಿನಂತಿಸಿದೆ.
ಈ ಹಿಂದೆ, ಸರ್ಕಾರವು ರೆಸ್ಟೋರೆಂಟ್‌ಗಳನ್ನು 24 ಗಂಟೆ ತೆರೆದಿಡಲು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದರೆ, ಸಿಬ್ಬಂದಿ ಕೊರತೆ ಕಾರಣಕ್ಕೆ ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ 24/7 ರೆಸ್ಟೋರೆಂಟ್‌ಗಳನ್ನು ತೆರೆದಿಡಲು ಮಾರ್ಗಸೂಚಿ ಹೊರಡಿಸಿರುತ್ತಾರೆ. ಇದರ ಜೊತೆಗೆ ಕೇರಳ ಮತ್ತು ತಮಿಳುನಾಡು, ಉಚ್ಚನ್ಯಾಯಾಲಯಗಳು ಕೂಡ ಇದರ ಬಗ್ಗೆ ಸಮಂಜಸವಾದ ತೀರ್ಪು ಕೊಟ್ಟಿರುತ್ತಾರೆ. ದೇಶದ ಇತರ ರಾಜ್ಯಗಳಾದ ದೆಹಲಿ, ತಮಿಳುನಾಡು, ಕೇರಳ, ಗುಜರಾತ್ ಮುಂತಾದ ಕಡೆಗಳಲ್ಲಿ ಈಗಾಗಲೇ 24/7 ತರೆದಿಡಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಬಹಳಷ್ಟು ಜನರಿಗೆ ಉಪಯೋಗವಾಗಲಿದೆ.
ಹಾಲು ಮತ್ತು ದಿನಪತ್ರಿಕೆ ಸರಬರಾಜು ಮಾಡುವವರು, ತರಕಾರಿ, ಹೂವು, ಹಣ್ಣು ಮುಂತಾದವುಗಳನ್ನು ಮಾರ್ಕೆಟ್‌ಗೆ ತರುವ ರೈತರು ಹಾಗೂ ವ್ಯಾಪಾರಿಗಳು, ಶಿಫ್ಟ್‌ನಲ್ಲಿ ಕೆಲಸಕ್ಕೆ ಹೋಗುವವರು ಮುಂತಾದ ಬಹಳಷ್ಟು ಜನಸಾಮಾನ್ಯರು ಇರುತ್ತಾರೆ. ಇವರಿಗೆ ಆಹಾರದ ಅಗತ್ಯತೆ ಇರುತ್ತದೆ. ಇದಲ್ಲದೆ ಬಹಳಷ್ಟು ಪ್ರವಾಸಿಗರು ಬಸ್, ರೈಲು ಮತ್ತು ವಿಮಾನದ ಮೂಲಕ ರಾತ್ರಿ ಬಂದಿಳಿಯುತ್ತಾರೆ. ಅಗತ್ಯ ಸೇವೆ ಒದಗಿಸುವ ಪೋಲೀಸ್, ಆಂಬ್ಯುಲೆನ್ಸ್. ವೈದ್ಯಕೀಯ ಸಿಬ್ಬಂದಿ ಮುಂತಾದವರು ರಾತ್ರಿ ಓಡಾಡುತ್ತಾರೆ. ಇವರೆಲ್ಲರಿಗೂ ಅನುಕೂಲವಾಗಲಿದೆ, ಎಂದು ಅಸೋಸಿಯೇಷನ್ ತಮ್ಮ ಜ್ಞಾಪಕ ಪತ್ರದಲ್ಲಿ ತಿಳಿಸಿವೆ.