ಬೆಂಗಳೂರು: ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ತೊಂದರೆ ಉಂಟಾಗಿರುವ ಹಿನ್ನೆಲೆ, ಇಂದಿನಿಂದ ಬೆಂಗಳೂರಿನಲ್ಲಿ ಹಲವು ಹೋಟೆಲ್ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹೋಟೆಲ್ ಅಸೋಸಿಯೇಶನ್ ಎಚ್ಚರಿಕೆ ನೀಡಿದೆ.
ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ಪಿ.ಸಿ. ರಾವ್ ಅವರು ಮಾತನಾಡಿ, ನಗರದಲ್ಲಿ ಏಕಾಏಕಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸರಬರಾಜು ನಿಲ್ಲಿಸಿರುವುದರಿಂದ ಹೋಟೆಲ್ಗಳನ್ನು ನಡೆಸುವುದು ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ. ಗ್ಯಾಸ್ ಇಲ್ಲದೆ ಅಡುಗೆ ಮಾಡುವುದು ಸಾಧ್ಯವಿಲ್ಲದ ಕಾರಣ, ಇಂದಿನಿಂದ ಹಲವಾರು ಹೋಟೆಲ್ಗಳಲ್ಲಿ ತಿಂಡಿ-ತಿನಿಸು ಸಿಗದೇ ಇರಬಹುದೆಂಬ ಆತಂಕ ವ್ಯಕ್ತವಾಗಿದೆ.
“ಹೋಟೆಲ್ ಬಂದ್ ಮಾಡುವುದು ನಮ್ಮ ಉದ್ದೇಶವೇ ಅಲ್ಲ. ಆದರೆ ಗ್ಯಾಸ್ ಪೂರೈಕೆ ಇಲ್ಲದಿದ್ದರೆ ಹೋಟೆಲ್ ನಡೆಸುವುದು ಅಸಾಧ್ಯವಾಗುತ್ತದೆ,” ಎಂದು ಪಿ.ಸಿ. ರಾವ್ ಹೇಳಿದ್ದಾರೆ. ಈ ಸಮಸ್ಯೆ ಕುರಿತು ಕೇಂದ್ರ ಸಚಿವರು ಹಾಗೂ ಬೆಂಗಳೂರಿನ ಸಂಸದರಿಗೆ ಈಗಾಗಲೇ ಮಾಹಿತಿ ನೀಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೋಟೆಲ್ ಉದ್ಯಮವನ್ನು ಅವಲಂಬಿಸಿ ಸಾವಿರಾರು ಕಾರ್ಮಿಕರು ಹಾಗೂ ವ್ಯಾಪಾರಿಗಳು ಬದುಕು ನಡೆಸುತ್ತಿರುವ ಹಿನ್ನೆಲೆ, ವಾಣಿಜ್ಯ ಗ್ಯಾಸ್ ಪೂರೈಕೆ ತಕ್ಷಣ ಪುನರಾರಂಭವಾಗದಿದ್ದರೆ ಬೆಂಗಳೂರಿನ ಆಹಾರ ಸೇವಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಉದ್ಯಮ ವಲಯ ಆತಂಕ ವ್ಯಕ್ತಪಡಿಸಿದೆ.
