ಬೆಂಗಳೂರು:
ಬಾಡಿಗೆ ವಿಚಾರದಲ್ಲಿ ಜಗಳವಾಗಿ ನಿವೃತ್ತ ಉಪ ತಹಸೀಲ್ದಾರ್ ಅವರನ್ನು ಕೊಲೆ ಮಾಡಿರುವ ಘಟನೆ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಾಜೇಶ್ವರಿ (61) ಕೊಲೆಯಾಗಿರುವ ನಿವೃತ್ತ ಉಪ ತಹಸೀಲ್ದಾರ್. ಫೆಬ್ರವರಿ 3ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸೇರಿ ಮೂವರು ಆರೋಪಿಗಳನ್ನು ವಿವಿ ಪುರಂ ಪೋಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದಾತ ಅಲಿಂ ಪಾಷಾ ಎಂದು ಗುರುತಿಸಿದ್ದು ಅಲಿಂ ಪಾಷಾ, ಸಾಧಿಕ್ ಪಾಷಾ ಹಾಗೂ ಆಶ್ರಫ್ ಉನ್ನಿಸಾ ಎಂಬ ಮೂವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ.
ಪಾರ್ವತಿಪುರದಲ್ಲಿ ರಾಜೇಶ್ವರಿ ಇವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ನೀಡಿದ್ದರು. ಒಂಬತ್ತು ತಿಂಗಳಿನಿಂದ ಬಾಡಿಗೆದಾರ ಬಾಡಿಗೆ ನೀಡದ ಕಾರಣ ಮನೆ ಬಳಿ ಹೋಗಿ ರಾಜೇಶ್ವರಿ ಬಾಡಿಗೆ ಹಣ ನೀಡುವಂತೆ ಕೇಳಿದ್ದಾರೆ.
ರಾಜೇಶ್ವರಿ ತಮ್ಮ ಮನೆಯ ಮೂರನೇ ಮಹಡಿಯನ್ನು ಅಲಿಂ ಪಾಷಾ ಗೆ ಬಾಡಿಗೆಗೆ ನೀಡಿದ್ದರು. ಎರಡು ವರ್ಷದಿಂದ ವಾಸವಿದ್ದ ಆರೋಪಿ ಅಲಿಂ ಪಾಷಾ ಕಳೆದ ಒಂಬತ್ತು ತಿಂಗಳಿನಿಂದ ಬಾಡಿಗೆ ಹಣ ನೀಡಿರಲಿಲ್ಲ. ಬಾಡಿಗೆ ನೀಡದಿದ್ದರೆ ಪೋಲೀಸರಿಗೆ ಹೇಳುವುದಾಗಿ ಬೆದರಿಸಿದ್ದಾರೆ. ಇದರಿಂದ ಕುಪಿತನಾದ ಆರೋಪಿ ರಾಜೇಶ್ವರಿಯನ್ನು ಮನೆಯೊಳಗೆ ಎಳೆದದ್ದಲ್ಲದೆ ಚಾಕುವಿನಿಂದ ಆಕೆ ಕತ್ತನ್ನು ಸೀಳಿ ಕೊಲೆ ಮಾಡಿದ್ದಾನೆ. ಆ ನಂತರ ತನ್ನ ಚಿಕ್ಕಪ್ಪ ಮತ್ತು ಸ್ನೇಹಿತನಿಗೆ ಕರೆ ಮಾಡಿ ಗೋಣಿಚೀಲದಲ್ಲಿ ಮೃತದೇಹವನ್ನಿಟ್ಟು ಬಿಡದಿ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿದ್ದಾನೆ.
ಇತ್ತ ಮೃತ ರಾಜೇಶ್ವರಿ ಪುತ್ರ ದೀಪಕ್ ತಾಯಿ ನಾಪತ್ತೆಯಾಗಿರುವ ಬಗ್ಗೆ ವಿವಿ ಪುರಂ ಪೋಲೀಸರಿಗೆ ದೂರು ನೀಡಿದಾಗ ಪೋಲೀಸರು ತನಿಖೆ ಕೈಗೊಂಡು ಕೃತ್ಯ ಬೆಳಕಿಗೆ ತಂದಿದ್ದಾರೆ.