ಬೆಂಗಳೂರು:
ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ರಾಜ್ಯದೆಲ್ಲೆಡೆ ಕೈಗೆತ್ತಿ ಕೊಂಡಿರುವ ವಸತಿ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ವಸತಿ ಸಚಿವ ಜಮೀರ್ ಅಹಮದ್ ಖಾನ್ ಗಡುವು ನೀಡಿದ್ದಾರೆ.
ಸೋಮವಾರ ಕಾವೇರಿ ಭವನದಲ್ಲಿರುವ ಗೃಹ ಮಂಡಳಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಿಗಮದಿಂದ 52 47882 ಕುಟುಂಬಗಳಿಗೆ ಸೂರು ಕಲ್ಪಿಸುವ 42 ಯೋಜನೆ ಕೈಗೆತ್ತಿ ಕೊಂಡಿದ್ದರೂ 4665 ಮನೆ ಮಾತ್ರ ಪೂರ್ಣಗೊಳಿಸಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಸಚಿವರು, ಕಾಲಮಿತಿ ನಿಗದಿ ಮಾಡಿಕೊಂಡು ಆದಷ್ಟು ಶೀಘ್ರ ಯೋಜನೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ರಾಜ್ಯದ ಎಲ್ಲೆಡೆ ಕೈಗೊಂಡಿರುವ ಪ್ರತಿ ಯೋಜನೆ ಪ್ರಸ್ತುತ ಯಾವ ಹಂತದಲ್ಲಿದೆ ಎಂಬ ಬಗ್ಗೆ ವರದಿ ಸಲ್ಲಿಸಿ, ಅನುದಾನ ಕೊರತೆ ಅಥವಾ ಬೇರೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ವರದಿಯಲ್ಲಿ ಸೇರಿಸಿ ಎಂದು ಸೂಚನೆ ನೀಡಿದರು.
ನಿಗಮದ ವಸತಿ ಯೋಜನೆಗಳಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ಮಾಡಿರುವ ಪ್ರಮಾಣಕ್ಕಿಂತ ಹೆಚ್ಚಾಗಿ ಹಣ ಬಿಡುಗಡೆ ಮಾಡಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಕಹಂತ ಹಂತ ವಾಗಿ ಹಣ ಬಿಡುಗಡೆ ಮಾಡದೆ ಕೆಲಸ ಪೂರ್ತಿ ಮಾಡದಿದ್ದರೂ ಯಾವ ಕಾರಣಕ್ಕೆ ಪಾವತಿ ಮಾಡಲಾಗಿದೆ ಎಂದು ಪ್ರೆಶ್ನೆ ಮಾಡಿದರು.
ಇನ್ಮುಂದೆ ಯಾವುದೇ ಕಾರಣಕ್ಕೂ ಈ ರೀತಿ ಮಾಡುವಂತಿಲ್ಲ. ಜತೆಗೆ ಫಲಾನುಭವಿಗಳ ವಂತಿಗೆ ಪಡೆಯದೆ, ಬ್ಯಾಂಕ್ ಸಾಲ ದ ಖಾತರಿ ದೊರಕದೆ ಹಂಚಿಕೆ ಪತ್ರ ನೀಡುವಂತಿಲ್ಲ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರ ಒಂದು ಲಕ್ಷ ಮನೆ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳದ ಬಗ್ಗೆಯೂ ಬೇಸರ ವ್ಯಕ್ತ ಪಡಿಸಿದ ಸಚಿವರು, ಕಾಲ ಮಿತಿಯಲ್ಲಿ ಮನೆ ನಿರ್ಮಿಸಿ ಕೊಡದಿದ್ದರೆ ಜನರಲ್ಲಿ ವಿಶ್ವಾಸ ಬರಲು ಹೇಗೆ ಸಾಧ್ಯ ಎಂದು ಕೇಳಿದರು.
ಒಂದು ತಿಂಗಳಲ್ಲಿ 12 ಸಾವಿರ ಮನೆ ಹಂಚಿಕೆಗೆ ಕ್ರಮ ವಹಿಸಬೇಕು. ಫಲಾನುಭ ವಿಗಳಿಗೆ ಬ್ಯಾಂಕ್ ಸಾಲ ವ್ಯವಸ್ಥೆ ಮಾಡಿಸಿ ಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಕೀ ಹಸ್ತಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಒಟ್ಟಾರೆ 2013 ರಿಂದ ಇದುವರೆಗಿನ ನಿಗಮದ ಯೋಜನೆಗಳ ಪ್ರಗತಿ ಕುರಿತು ವರದಿ ಸಲ್ಲಿಸುವಂತೆಯೂ ಸೂಚನೆ ನೀಡಿದರು. ಮುಂದಿನ ಪ್ರಗತಿ ಪರಿಶೀಲನೆ ಸಭೆಗೆ ಬರುವಷ್ಟರಲ್ಲಿ ಯಾವ್ಯಾವ ಯೋಜನೆ ಎಷ್ಟು ಪ್ರಗತಿ ಕಂಡಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಿ ಮಾಹಿತಿ ಪಡೆಯಲಿದ್ದೇನೆ ಎಂದು ಹೇಳಿದರು.
ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಮ್ಮ ಉಪಸ್ಥಿತರಿದ್ದರು.