ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ HPV ಲಸಿಕಾ ಅಭಿಯಾನ: ಈಗಾಗಲೇ 2,562 ಹೆಣ್ಣು ಮಕ್ಕಳಿಗೆ ಲಸಿಕೆ
ಬೆಂಗಳೂರು: ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV) ಲಸಿಕಾ ಅಭಿಯಾನವನ್ನು ಜಾರಿಗೊಳಿಸಲಾಗಿದ್ದು, ಈಗಾಗಲೇ 2,562 ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗಿದೆ.
ಗರ್ಭಕಂಠ ಕ್ಯಾನ್ಸರ್ ವಿಶ್ವದ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಕ್ಯಾನ್ಸರ್ಗಳಲ್ಲಿ ಒಂದಾಗಿದ್ದು, ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. 2022ರಲ್ಲಿ ಸುಮಾರು 79,103 ಪ್ರಕರಣಗಳು ದಾಖಲಾಗಿದ್ದು, 34,805 ಮಹಿಳೆಯರು ಮೃತಪಟ್ಟಿದ್ದಾರೆ. ಪ್ರತಿ 1 ಲಕ್ಷ ಜನಸಂಖ್ಯೆಗೆ ಸುಮಾರು 14 ಹೆಣ್ಣು ಮಕ್ಕಳು ಈ ರೋಗದಿಂದ ಬಳಲುತ್ತಿದ್ದಾರೆ.
ಈ ಕ್ಯಾನ್ಸರ್ಗೆ ಮುಖ್ಯ ಕಾರಣ ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV) ಸೋಂಕು. ವೈಯಕ್ತಿಕ ಸ್ವಚ್ಛತೆ ಕೊರತೆ, ಜನನಾಂಗ ಸಂಬಂಧಿತ ಸಮಸ್ಯೆಗಳು ಹಾಗೂ ಅಸುರಕ್ಷಿತ ಸಂಪರ್ಕದಿಂದ ಈ ವೈರಸ್ ಹರಡುತ್ತದೆ. ನಂತರ ಗರ್ಭಕಂಠದ ಕೋಶಗಳಲ್ಲಿ ಬದಲಾವಣೆ ಉಂಟಾಗಿ ಕ್ಯಾನ್ಸರ್ಗೆ ಕಾರಣವಾಗುತ್ತದೆ.
ಈ ಹಿನ್ನೆಲೆಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) 2030ರೊಳಗೆ 14 ವರ್ಷದ 90% ಹೆಣ್ಣು ಮಕ್ಕಳಿಗೆ HPV ಲಸಿಕೆ ನೀಡುವ ಗುರಿಯನ್ನು ಹೊಂದಿದೆ. ಬಾಲ್ಯದಲ್ಲೇ ಲಸಿಕೆ ನೀಡುವುದರಿಂದ ಭವಿಷ್ಯದಲ್ಲಿ ಸೋಂಕಿನಿಂದ ರಕ್ಷಣೆ ಸಾಧ್ಯವಾಗುತ್ತದೆ.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಚ್ 26ರಿಂದ 14ರಿಂದ 15 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ HPV ಲಸಿಕಾಕರಣ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಲಸಿಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 365 ವಾರ್ಡುಗಳಲ್ಲಿ ಸುಮಾರು 1,18,339 ಹೆಣ್ಣು ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, 145 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಕಾರ್ಯಕ್ರಮ ಜಾರಿಯಲ್ಲಿದೆ. ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದವರಿಗೆ ಮರು ಲಸಿಕೆ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇಲ್ಲಿಯವರೆಗೆ 2,562 ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಯಾವುದೇ ಅಡ್ಡ ಪರಿಣಾಮಗಳು ವರದಿಯಾಗಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು ಮಾಹಿತಿಗಳಿಗೆ ಒಳಗಾಗದೆ, ಪೋಷಕರು ತಮ್ಮ ಮಕ್ಕಳ ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಹಾಕಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಲಸಿಕಾಕರಣದ ನಂತರ ಇ-ಪ್ರಮಾಣಪತ್ರ ನೀಡಲಾಗುತ್ತದೆ. ಪೋಷಕರು U-WIN (https://uwin.mohfw.gov.in/home) ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು ಲಸಿಕಾಕರಣ ಕೇಂದ್ರಗಳಿಗೆ ಭೇಟಿ ನೀಡಬಹುದು.
ಹೆಣ್ಣು ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ HPV ಲಸಿಕೆ ಅತ್ಯಂತ ಅಗತ್ಯವಾಗಿದ್ದು, ಈ ಅಭಿಯಾನವನ್ನು ಯಶಸ್ವಿಗೊಳಿಸಲು ಪೋಷಕರ ಸಹಕಾರ ಅತ್ಯಂತ ಮುಖ್ಯವಾಗಿದೆ.
