Home ಹುಬ್ಬಳ್ಳಿ ಹುಬ್ಬಳ್ಳಿಯ ಅಂಜಲಿ ಹತ್ಯೆ ಪ್ರಕರಣ: ದಾವಣಗೆರೆಯಲ್ಲಿ ಆರೋಪಿಯ ಬಂಧನ

ಹುಬ್ಬಳ್ಳಿಯ ಅಂಜಲಿ ಹತ್ಯೆ ಪ್ರಕರಣ: ದಾವಣಗೆರೆಯಲ್ಲಿ ಆರೋಪಿಯ ಬಂಧನ

23
0

ಹುಬ್ಬಳ್ಳಿ, ಮೇ 17: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣದ ನೆನಪು ಮಾಸುವ ಮುನ್ನವೇ ನಡೆದ ಮತ್ತೋರ್ವ ಯುವತಿ ಅಂಜಲಿ ಅಂಬಿಗೇರ ಎಂಬ ಯುವತಿಯ ಬರ್ಬರ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಸಾವಂತ್ ಎಂಬಾತನನ್ನು ಗುರುವಾರ ತಡರಾತ್ರಿ ದಾವಣಗೆರೆಯಲ್ಲಿ ಬಂಧಿಸಲಾಗಿದೆ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.

ಮೈಸೂರಿನಿಂದ ತಲೆಮರೆಸಿಕೊಳ್ಳುವ ಉದ್ದೇಶದಿಂದ ಗೋವಾ-ಮಹಾರಾಷ್ಟ್ರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗಿರೀಶ್ ಸಾವಂತ್ ಕಳೆದ ರಾತ್ರಿ 11:30ರ ಸುಮಾರಿಗೆ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ರೈಲ್ವೆ ಪೊಲೀಸರು ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ದಾವಣಗೆರೆ ಪೊಲೀಸರು ಆತನ ಗುರುತು ಪತ್ತೆ ಹಚ್ಚಿ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಇಂದು ಮುಂಜಾವ 4:30ರ ಸುಮಾರಿಗೆ ಆತನನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಹ ಪ್ರಯಾಣಿಕರಾಗಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಪ್ರಯಾಣಿಕರನ್ನು ಆತನಿಗೆ ಥಳಿಸಿದ್ದಾರೆ. ಈ ವೇಳೆ ರೈಲಿನಿಂದ ಹಾರಿದ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ  ಲಭ್ಯವಾಗಿಲ್ಲ. ಗಿರೀಶ್ ರೈಲಿನಿಂದ ಕೆಳಗೆ ಬೀಳಲು ಕಾರಣ ಏನೆಂಬುದನ್ನು ಆತನ ಹೇಳಿಕೆಯಿಂದಷ್ಟೇ ತಿಳಿದುಬರಬೇಕಿದೆ. ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿರುವುದರಿಂದ ಗಿರೀಶ್ ಸದ್ಯ ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ಪೊಲೀಸ್ ಆಯಕ್ತರು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಎರಡು ದಿನಗಳ ಹಿಂದೆ ಅಂಜಲಿ ಅಂಬಿಗೇರ್ ಎಂಬ ಯುವತಿಯನ್ನು ಆರೋಪಿ ಗಿರೀಶ್ ಸಾವಂತ್ ಎಂಬ ಯುವಕ ತನ್ನ ಪ್ರೇಮ ನಿವೇದನೆಗೆ ಸಹಕರಿಸುತ್ತಿಲ್ಲ ಎಂದು ಸಿಟ್ಟಿನಿಂದ ಬೆಳಗ್ಗೆ ಆಕೆಯ ಮನೆಯೊಳಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.

LEAVE A REPLY

Please enter your comment!
Please enter your name here