ಬೆಂಗಳೂರು: ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಅಧಿಕಾರಿ ಮತ್ತು ನೌಕರರ 26 ತಿಂಗಳ ಹಿಂಬಾಕಿ ವೇತನವಾಗಿ ಒಟ್ಟು ₹1,239.47 ಕೋಟಿ ಬಿಡುಗಡೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ಪ್ರಕಟಣೆ ನೀಡಿದ ಅವರು, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಸಮಿತಿಯ ಶಿಫಾರಸ್ಸಿನ ಮೇರೆಗೆ 2022ರ ಜನವರಿ 1ರಿಂದ 2023ರ ಫೆಬ್ರವರಿ 28ರವರೆಗೆ 14 ತಿಂಗಳ ಹಿಂಬಾಕಿ ವೇತನ ಪಾವತಿಗೆ ₹718.93 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಇದಲ್ಲದೆ, 2020ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ 12 ತಿಂಗಳ ವೇತನ ಹಿಂಬಾಕಿ ಮೊತ್ತವಾಗಿ ₹520.54 ಕೋಟಿ ವಿಶೇಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಹೇಳಿದರು.
ವೇತನ ಹೆಚ್ಚಳ ಸಂಬಂಧ, 2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಶೇಕಡಾವಾರು ವೇತನ ಪರಿಷ್ಕರಣೆ ಕುರಿತು ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ಮತ್ತು ಸಂಧಾನ ಪ್ರಕ್ರಿಯೆ ಆರಂಭಿಸಲು ಆದೇಶಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವೇತನ ಪರಿಷ್ಕರಣೆ ಮತ್ತು ಹಿಂಬಾಕಿ ಪಾವತಿ ಆದೇಶವನ್ನು ಕಾರ್ಮಿಕ ಸಂಘಟನೆಗಳು ಹಾಗೂ ನೌಕರರು ಒಪ್ಪಿಕೊಂಡು ಸಹಕರಿಸುವಂತೆ ಸಚಿವರು ಮನವಿ ಮಾಡಿದ್ದಾರೆ.
