ಬೆಳಗಾವಿ:
ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯಲಾಗುವ ಸಂಸತ್ ಭವನದಲ್ಲಿ ಇಂದು ಭಾರಿ ಭದ್ರತಾ ವೈಫಲ್ಯ ನಡೆದಿರುವುದು ಆತಂಕಕಾರಿ. ಭಾರಿ ಭದ್ರತೆಯ ಸ್ಥಳದಲ್ಲೇ ಹೀಗಾದರೆ ಇನ್ನು ದೇಶದ ಜನರ ರಕ್ಷಣೆ ಹೇಗೆ ಸಾಧ್ಯ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಂಸತ್ ಭವನದಲ್ಲಿ ಬಹು ಹಂತರ ಭದ್ರತೆ, ತಪಾಸಣೆ ಇದ್ದರೂ ಈ ರೀತಿಯ ಭದ್ರತಾ ವೈಫಲ್ಯ ನಡೆದದ್ದು ಹೇಗೆ. ಇಡೀ ದೇಶವೇ ಬೆಚ್ಚಿ ಬೀಳುವ ಘಟನೆ ಇದು ಎಂದು ಅವರು ತಿಳಿಸಿದ್ದಾರೆ.
ದಾಳಿ ನಡೆಸಿದ ಯುವಕರಿಗೆ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ನೀಡಲಾಗಿದೆ. ಪಾಸ್ ನೀಡುವ ಮುನ್ನ ವ್ಯಕ್ತಿಗಳ ಪೂರ್ವಾಪರ ವಿಚಾರಿಸದೇ ಇರುವುದು ನಿರ್ಲಕ್ಷ್ಯ ವನ್ನು ತೋರುತ್ತದೆ. ಇದು ಅಕ್ಷಮ್ಯ ಎಂದು ಹೇಳಿದ್ದಾರೆ.
ಸರಿಯಾಗಿ 22 ವರ್ಷಗಳ ಹಿಂದೆ ಇದೇ ದಿನ ಸಂಸತ್ ಭವನದ ಮೇಲೆ ದಾಳಿ ನಡೆದಿತ್ತು. 2001 ರಲ್ಲಿ ಸಂಸತ್ ಭವನದ ಹೊರಭಾಗದಲ್ಲಿ ದಾಳಿ ನಡೆದಿತ್ತು. ಆದರೆ ಈ ಬಾರಿ ಸಂಸತ್ ಭವನದ ಒಳಭಾಗದಲ್ಲೇ ಈ ರೀತಿಯ ಘಟನೆ ನಡೆದಿದೆ. ದೇಶದಲ್ಲಿ ಅತೀ ಹೆಚ್ಚು ಭದ್ರತೆ ಇರುವುದು ಸಂಸತ್ ಭವನಕ್ಕೆ. ಇಲ್ಲಿಯೇ ಈ ರೀತಿಯ ಭದ್ರತಾ ಲೋಪವಾದರೆ ದೇಶದ ಭದ್ರತೆ ಹಾಗೂ ಸಾಮಾನ್ಯ ಜನರ ರಕ್ಷಣೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುವುದರಲ್ಲಿ ಆಶ್ಚರ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದೊಂದು ಸಾಮಾನ್ಯ ಘಟನೆ ಅಲ್ಲ. ಇಂತಹವು ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಭದ್ರತೆಯನ್ನು ಬೆಟ್ಟು ಮಾಡಿ ತೋರಿಸಲು ನಾವೇ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ದಾಳಿ ನಡೆಸಿದ ಯುವಕರನ್ನು ಸರಿಯಾದ ರೀತಿಯಲ್ಲಿ ವಿಚಾರಣೆ ಮಾಡಬೇಕು. ಇನ್ನು ಮುಂದಾದರೂ ಇಂತಹ ಕೃತ್ಯಗಳು ನಡೆಯದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.