ಬೆಂಗಳೂರು, ಮಾರ್ಚ್ 12: “ನನ್ನ ತಾಯಿಯ ಪರಿಶ್ರಮ ಮತ್ತು ಅಕ್ಕನ ತ್ಯಾಗದ ಫಲವಾಗಿ ನಾನು ಇಂದು ನಿಮ್ಮ ಮುಂದೆ ನಿಂತಿದ್ದೇನೆ. ನನ್ನ ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಬಹಳ ಮಹತ್ವದ್ದು,” ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವ್ಯವಸ್ಥಾಪಕ ನಿರ್ದೇಶಕ (ಪ್ರಭಾರಿ) ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಬೆಂಗಳೂರುದಲ್ಲಿ ಕೆಪಿಟಿಸಿಎಲ್ ಮಹಿಳಾ ನೌಕರರ ದೂರು ನಿವಾರಣಾ ಸಮಿತಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಜೀವನದ ಕಠಿಣ ಸಂದರ್ಭಗಳನ್ನು ನೆನೆಸಿಕೊಂಡ ಅವರು, “ಒಮ್ಮೆ ನನ್ನ ತಾಯಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ‘ಮಗು ಉಳಿಯಬಹುದು ಅಥವಾ ತಾಯಿ ಉಳಿಯಬಹುದು’ ಎಂಬ ಸ್ಥಿತಿ ಎಂದು ತಿಳಿಸಿದರು. ಆದರೆ ನನ್ನ ತಾಯಿ ‘ಮಗು ಉಳಿಯಲಿ, ನನ್ನ ಪ್ರಾಣ ಹೋದರೂ ಪರವಾಗಿಲ್ಲ’ ಎಂದು ಹೇಳಿ ತ್ಯಾಗಕ್ಕೆ ಸಿದ್ಧರಾದರು. ಆ ತಾಯಿಯ ತ್ಯಾಗವೇ ನನ್ನ ಬದುಕಿನ ಕಾರಣ,” ಎಂದು ಭಾವನಾತ್ಮಕವಾಗಿ ಹೇಳಿದರು.
ಇನ್ನೂ ತಮ್ಮ ಅಕ್ಕನ ತ್ಯಾಗವನ್ನು ನೆನೆದು ಮಾತನಾಡಿದ ಅವರು, “ನನ್ನ ಅಕ್ಕ ಪದವಿ ಮುಗಿಸಿ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಲು ಕನಸು ಕಂಡಿದ್ದಳು. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ತನ್ನ ವಿದ್ಯಾಭ್ಯಾಸವನ್ನು ಬಿಟ್ಟು ನನ್ನ ಓದಿಗೆ ಅವಕಾಶ ಕಲ್ಪಿಸಿದಳು. ತಾಯಿಯ ಪರಿಶ್ರಮ ಮತ್ತು ಅಕ್ಕನ ತ್ಯಾಗದ ಫಲವಾಗಿ ನಾನು ಇಂದು ಐಎಎಸ್ ಅಧಿಕಾರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ,” ಎಂದು ಹೇಳಿದರು.
ಮಹಿಳೆಯರಿಗೆ ಸಂದೇಶ ನೀಡಿದ ಅವರು, “ಪ್ರತಿ ಮಹಿಳೆಯಲ್ಲೂ ಅನೇಕ ಕನಸುಗಳಿರುತ್ತವೆ. ಆದರೆ ಕುಟುಂಬದ ಒತ್ತಡಗಳಿಂದಾಗಿ ಬಹಳಷ್ಟು ಮಹಿಳೆಯರು ತಮ್ಮ ಕನಸುಗಳನ್ನು ತ್ಯಜಿಸುತ್ತಾರೆ. ಮಹಿಳೆಯರು ತಮ್ಮ ಕನಸುಗಳನ್ನು ಬಿಟ್ಟುಕೊಡಬಾರದು,” ಎಂದು ಹೇಳಿದರು.
ತಮ್ಮ ಪತ್ನಿಯ ಉದಾಹರಣೆಯನ್ನು ನೀಡಿದ ಅವರು, “ನನ್ನ ಪತ್ನಿಗೂ ಐಎಎಸ್ ಆಗುವ ಕನಸಿತ್ತು ಎಂಬುದು ನನಗೆ ನಂತರ ತಿಳಿಯಿತು. ಆಗ ಅವರಿಗೆ ತಯಾರಿ ಮಾಡಲು ಉತ್ತೇಜನ ನೀಡಿದೆ. ಅವರು ಗರ್ಭಿಣಿಯಾಗಿದ್ದರೂ ತರಬೇತಿ ಮುಂದುವರೆಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಂದು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿಗಮದ ನಿರ್ದೇಶಕ ಬಿ.ಪಿ. ವಿಜಯ್, ವ್ಯವಸ್ಥಾಪಕ ನಿರ್ದೇಶಕ ಡಿ. ಕೋದಂಡಪಾಣಿ, ನಿರ್ದೇಶಕರು (ಯೋಜನೆ) ಗಿರಿಧರ್ ಕುಲಕರ್ಣಿ, ನಿರ್ದೇಶಕರು (ಕಾರ್ಯಾಚರಣೆ) ವಿಶ್ವನಾಥ್ ನಾಯಕ್, ನಿರ್ದೇಶಕರು (ಹಣಕಾಸು) ಕೆ.ಎನ್. ಗಂಗಾಧರ್, ಮಾಜಿ ಅಧ್ಯಕ್ಷೆ ಸಿ. ಸುಜಾತ ಹಾಗೂ ಮಹಿಳಾ ದೂರು ನಿವಾರಣಾ ಸಮಿತಿ ಅಧ್ಯಕ್ಷೆ ಎಸ್.ಎನ್. ಸುಧಾ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.
