ನವದೆಹಲಿ / ಬೆಂಗಳೂರು: ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಹೈಕಮಾಂಡ್ ಸದಸ್ಯರನ್ನು ಭೇಟಿ ಮಾಡಿ ಮಹತ್ವದ ರಾಜಕೀಯ ಚರ್ಚೆ ನಡೆಸಿದರು. 10 ಜನಪತ್ನಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಇದಕ್ಕೂ ಮುನ್ನ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ದೀರ್ಘ ಚರ್ಚೆ ನಡೆಸಿದ್ದರು.
ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಒಳಗಿನ ಚರ್ಚೆಗಳ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. “ನಾನು ರಾಜಕೀಯಕ್ಕಾಗಿ ಬಂದಿದ್ದೇನೆ. ಬೇಕಾದದ್ದು ಎಲ್ಲವೂ ಮಾತನಾಡಿದ್ದೇವೆ. ಎಲ್ಲಕ್ಕೂ ಕಾಲವೇ ಉತ್ತರ ಕೊಡುತ್ತದೆ,” ಎಂದು ಅವರು ಹೇಳಿದರು.
ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣಾ ತಂತ್ರ ಹಾಗೂ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದರು. ಪಕ್ಷವನ್ನು ಮರುಸ್ಥಾಪಿಸಲು ಬೇಕಾದ ಕ್ರಮಗಳ ಕುರಿತು ವರಿಷ್ಠರೊಂದಿಗೆ ಸಮಾಲೋಚನೆ ನಡೆದಿದೆ ಎಂದು ತಿಳಿಸಿದರು.
ಆದರೆ ನಾಯಕತ್ವ ಸಂಬಂಧಿತ ಪ್ರಶ್ನೆಗಳಿಗೆ ಅವರು ನೇರ ಉತ್ತರ ನೀಡದೇ, “ಒಳಗೆ ಏನು ಮಾತಾಡಿದೆವು ಎಂಬುದನ್ನು ಸಾರ್ವಜನಿಕವಾಗಿ ಹೇಳುವ ಅಗತ್ಯವಿಲ್ಲ,” ಎಂದರು.
ಈ ಭೇಟಿ ಕಾಂಗ್ರೆಸ್ ಒಳಗಿನ ರಾಜಕೀಯ ಚಟುವಟಿಕೆಗಳಿಗೆ ಹೊಸ ತಿರುವು ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಈ ಚರ್ಚೆಗಳ ಪರಿಣಾಮ ಹೇಗಿರುತ್ತದೆ ಎಂಬುದನ್ನು ರಾಜಕೀಯ ವಲಯ ಕಾದು ನೋಡುತ್ತಿದೆ.
