ಬೆಂಗಳೂರು: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಲಂಚ ಮತ್ತು ಭ್ರಷ್ಟಾಚಾರ ಆರೋಪಗಳನ್ನು ತಳ್ಳಿಹಾಕಿ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮಂಗಳವಾರ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.
ನಿಯಮ 69ರ ಅಡಿಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಸಚಿವರು, ಯಾವುದೇ ಸಾಕ್ಷಿ ಅಥವಾ ಆಧಾರಗಳಿಲ್ಲದೆ ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶದಿಂದ ಮಾಡುವ ಆರೋಪಗಳಿಗೆ ತಾವು ಹೆದರಲ್ಲ, ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. “ನಾನು ಯಾವ ತಪ್ಪು ಮಾಡಿದ್ದೇನೆ? ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ,” ಎಂದು ಅವರು ಹೇಳಿದರು.
ಬಿಜೆಪಿ ಅವಧಿಯಲ್ಲಿ ಶಾಸಕರ ಖರೀದಿ ಸಂಬಂಧ ಆಡಿಯೋಗಳು ಬಿಡುಗಡೆಯಾಗಿದ್ದವು ಎಂದು ಉಲ್ಲೇಖಿಸಿದ ತಿಮ್ಮಾಪುರ, ಆಗ ಯಾರು ರಾಜೀನಾಮೆ ನೀಡಿದರು ಎಂದು ಪ್ರಶ್ನಿಸಿದರು. ಬಿಜೆಪಿ ಆಡಳಿತಾವಧಿಯಲ್ಲಿ ಹೊರಬಂದ ಹಲವು ಹಗರಣಗಳ ಕುರಿತು ತಮ್ಮ ಬಳಿ ದಾಖಲೆಗಳಿವೆ ಎಂದು ಅವರು ತಿರುಗೇಟು ನೀಡಿದರು.
ಅಬಕಾರಿ ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಅಕ್ರಮಗಳಲ್ಲಿ ತೊಡಗಿರುವ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. ಈಗಾಗಲೇ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದ ಅವರು, ತಮ್ಮ ವಿರುದ್ಧ ಲಂಚ ಆರೋಪಕ್ಕೆ ಸಂಬಂಧಿಸಿದ ಆಡಿಯೋ ಮಾಡಿರುವ ವ್ಯಕ್ತಿ CL-7 ಮದ್ಯದಂಗಡಿ ಪರವಾನಗಿಗೆ ಅರ್ಜಿ ಸಲ್ಲಿಸಿದ್ದಾನೆ. ಆದರೆ, ಆತನ ಅರ್ಜಿಯಲ್ಲಿ ಅಗತ್ಯ ದಾಖಲೆಗಳೇ ಸಮರ್ಪಕವಾಗಿರಲಿಲ್ಲ. ಇದರಿಂದ ನಿರಾಕರಣೆ ಎದುರಾದ ಹಿನ್ನೆಲೆಯಲ್ಲಿ ಬ್ಲ್ಯಾಕ್ಮೇಲ್ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದರು.
ತಾನು ದಲಿತ ಸಮುದಾಯಕ್ಕೆ ಸೇರಿದ್ದೇನೆ ಎಂಬ ಕಾರಣಕ್ಕೆ ಸ್ಥಾನ ಉಳಿಸಿಕೊಳ್ಳಲು ಬಳಸಿಕೊಳ್ಳುವುದಿಲ್ಲ ಎಂದು ಹೇಳಿದ ಸಚಿವರು, “ನಾನು ಯಾವುದೇ ರೀತಿಯಲ್ಲಿಯೂ ತಪ್ಪು ಮಾಡಿಲ್ಲ” ಎಂದು ಪುನರುಚ್ಚರಿಸಿದರು. ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಅವರು, ಬಿಜೆಪಿ ಅವಧಿಯಲ್ಲಿ 1,314 ಮದ್ಯ ಪರವಾನಗಿಗಳು ನೀಡಲಾಗಿದ್ದರೆ, ತಮ್ಮ ಅವಧಿಯಲ್ಲಿ 1,195 ಮದ್ಯದಂಗಡಿಗಳ ಪರವಾನಗಿಗಳು ಮಾತ್ರ ನೀಡಲಾಗಿದೆ ಎಂದು ವಿವರಿಸಿದರು.
ಈ ವಿಚಾರ ವಿಧಾನಸಭೆಯಲ್ಲಿ ರಾಜಕೀಯ ತೀವ್ರತೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಚರ್ಚೆ ಇನ್ನಷ್ಟು ಕಗ್ಗಂಟಾಗುವ ಸಾಧ್ಯತೆ ಇದೆ.
