ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಪೆನ್‍ಡ್ರೈವ್ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಯಾವುದೋ ವಿಚಾರದಲ್ಲಿ ನನ್ನ ಹೆಸರು ಹೇಳಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಈ ವಕೀಲ ದೇವರಾಜೇಗೌಡಗೂ ಸಂಬಂಧ ಇಲ್ಲ. ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ತನಿಖೆಯಾಗಲಿ. ಅಲ್ಲದೆ, ಪೆನ್‍ಡ್ರೈವ್ ಹೊರಗಿಟ್ಟಿದ್ದು ದೇವರಾಜೇಗೌಡ ಮತ್ತು ಕಾರ್ತಿಕ್. ಹೀಗಾಗಿ ಈ ಇಬ್ಬರನ್ನೂ ವಿಚಾರಣೆ ನಡೆಸಬೇಕು. ಈ ಪ್ರಕರಣಕ್ಕೂ ಡಿಕೆ ಶಿವಕುಮಾರ್ ಅವರಿಗಾಗಲಿ ಮತ್ತು ನನಗಾಗಲಿ ಯಾವುದೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ದೇವರಾಜೇಗೌಡ ನನಗೆ ಫೋನ್ ಮಾಡಿ, ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ಹೇಳಿದ್ದ. ನಾನು ಆಗಲಿ ಎಂದು ಫೋನ್‍ನಲ್ಲಿ ಹೇಳಿದ್ದೆ. ಈ ಮಾತನ್ನೇ ಇಟ್ಟುಕೊಂಡು ದೇವರಾಜೇಗೌಡ ಸುಳ್ಳು ಮಾಹಿತಿ ನೀಡಿದ್ದಾನೆ. ದೇವರಾಜೇಗೌಡ ಎ.29ರಂದು ಬೆಂಗಳೂರಿನ ಎಂ.ಜಿ.ರಸ್ತೆಯ ಬೌರಿಂಗ್ ಕ್ಲಬ್‍ನಲ್ಲಿ ನಮ್ಮನ್ನು ಭೇಟಿ ಮಾಡಿದ್ದ ಎಂದು ತಿಳಿಸಿದರು.