ಬೆಂಗಳೂರು / ಬೆಳಗಾವಿ: 2023 ರಲ್ಲಿ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 2028 ರಲ್ಲಿಯೂ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಎಂದಿಗೂ ಜನಾದೇಶದಿಂದ ಅಧಿಕಾರಕ್ಕೆ ಬಂದಿಲ್ಲ; ಹಿಂಬಾಗಿಲಿನ ರಾಜಕಾರಣದ ಮೂಲಕವೇ ಆಡಳಿತ ನಡೆಸಿದೆ ಎಂದು ಅವರು ತೀವ್ರವಾಗಿ ಟೀಕಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ವಿರೋಧಪಕ್ಷದ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ, “ನಮ್ಮ ಬಳಿ 140 ಶಾಸಕರ ಬೆಂಬಲವಿದೆ. ವಿರೋಧಪಕ್ಷದವರು ಇದರಲ್ಲಿ ಹುಳಿಹಿಂಡುವ ಅಗತ್ಯವಿಲ್ಲ. ಯಾವುದೇ ಪ್ರಚೋದನೆಗೂ ನಮ್ಮ ಶಾಸಕರು ಒಳಗಾಗುವುದಿಲ್ಲ” ಎಂದು ಹೇಳಿದರು.
ಜನರ ನಾಡಿಮಿಡಿತ ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿದೆ ಎಂದು ಹೇಳಿದ ಸಿದ್ದರಾಮಯ್ಯ, 2008 ಮತ್ತು 2018ರಲ್ಲಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿತ್ತು. ಒಂದೇ ಬಾರಿ ಕೂಡ ಜನರ ಆಶೀರ್ವಾದದಿಂದ ಬಿಜೆಪಿ ಸರ್ಕಾರ ರಚಿಸಿಲ್ಲ ಎಂದು ಆರೋಪಿಸಿದರು.
“2019ರಲ್ಲಿ ಬಿಜೆಪಿಯನ್ನು ತಡೆಯುವ ಉದ್ದೇಶದಿಂದ ಜೆಡಿಎಸ್ ಜೊತೆ ಸರ್ಕಾರ ರಚಿಸಲಾಯಿತು. ಆದರೆ ಬಿಜೆಪಿಯವರು ನಮ್ಮ ಮೈತ್ರಿಯ ಉದ್ದೇಶವನ್ನೇ ಪ್ರಶ್ನಿಸಿದರು. ಕರ್ನಾಟಕದ ಜನರು ಬಿಜೆಪಿಗೆ ಎಂದಿಗೂ ಅಧಿಕಾರ ನೀಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದರು.
ಐದು ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ ಎಂದು ಭರವಸೆ ನೀಡಿದ ಸಿಎಂ, ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಮಾತೇ ಅಂತಿಮ. ಆದರೆ ಬಿಜೆಪಿಯಲ್ಲಿ ಅಧ್ಯಕ್ಷರ ಆಯ್ಕೆಗೂ ಒಮ್ಮತ ಇಲ್ಲ. ಬಿಜೆಪಿಗೆ ಅಸೂಯೆ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.
“‘ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ’ ಎಂಬ ತತ್ವದಂತೆ ಆಡಳಿತ ನಡೆಸುತ್ತಿದ್ದೇವೆ. ಹೈಕಮಾಂಡ್ ಹೇಳುವ ತನಕ ನಾನೇ ಮುಖ್ಯಮಂತ್ರಿ. 2028 ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುತ್ತದೆ” ಎಂದು ಸಿದ್ದರಾಮಯ್ಯ ಖಡಕ್ವಾಗಿ ಹೇಳಿದರು.
