ಹೊಸದಿಲ್ಲಿ: ಅದಾನಿ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿ.(ಎಎಂಎನ್‌ಎಲ್) ಇಂಡೋ-ಏಶ್ಯನ್ ನ್ಯೂಸ್ ಸರ್ವಿಸ್ (IANS) ಸುದ್ದಿಸಂಸ್ಥೆಯಲ್ಲ್ ಶೇ.50.5ರಷ್ಟು ಪಾಲು ಬಂಡವಾಳವನ್ನು ಸ್ವಾಧೀನ ಪಡಿಸಿಕೊಂಡಿದೆ.
ಮತದಾನದ ಹಕ್ಕು ಹೊಂದಿರುವ ಮತ್ತು ಹೊಂದಿರದ ಈಕ್ವಿಟಿ ಶೇರುಗಳನ್ನು ತಾನು ಖರೀದಿಸಿದ್ದು, ಐಎಎನ್‌ಎಸ್ ಈಗ ಎಎಂಎನ್‌ಎಲ್‌ನ ಅಂಗಸಂಸ್ಥೆಯಾಗಲಿದೆ ಎಂದು ಕಂಪನಿಯು ತಿಳಿಸಿದೆ. ಈ ವರ್ಷದ ಪೂರ್ವಾರ್ಧದಲ್ಲಿ ಅದಾನಿ ಗ್ರೂಪ್ ಒಡೆತನದ ವಿಶ್ವಪ್ರಧಾನ ಕಮರ್ಷಿಯಲ್ ಪ್ರೈ.ಲಿ. ಸುದ್ದಿವಾಹಿನಿ ಎನ್‌ಡಿಟಿವಿಯ ಶೇ.99.5ರಷ್ಟು ಪಾಲು ಬಂಡವಾಳವನ್ನು ಸ್ವಾಧೀನಪಡಿಸಿಕೊಂಡಿತ್ತು.
ವರದಿಗಳ ಪ್ರಕಾರ ಅದಾನಿ ಗ್ರೂಪ್, ಡಿ.15ರಂದು ಮಾಡಿಕೊಂಡ ಒಪ್ಪಂದದಂತೆ ಐಎಎನ್‌ಎಸ್‌ನ ಶೇ.50.5ರಷ್ಟು ಶೇರುಗಳನ್ನು ತಾನು ಖರೀದಿಸಿರುವುದಾಗಿ ಶೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಿದೆ. ಈ ಸ್ವಾಧೀನವು ವ್ಯೂಹಾತ್ಮಕ ಸ್ವರೂಪದ್ದಾಗಿದೆ ಎಂದೂ ಅದು ಹೇಳಿದೆ.
ಐಎಎನ್‌ಎಸ್‌ನ ಎಲ್ಲ ಕಾರ್ಯಾಚರಣೆ ಮತ್ತು ನಿರ್ವಹಣೆ ನಿಯಂತ್ರಣವನ್ನು ಎಎಂಎನ್‌ಎಲ್ ಹೊಂದಿರಲಿದೆ ಮತ್ತು ಐಎಎನ್‌ಎಸ್‌ಗೆ ಎಲ್ಲ ನಿರ್ದೇಶಕರನ್ನು ನೇಮಕಗೊಳಿಸುವ ಹಕ್ಕನ್ನು ಹೊಂದಿರಲಿದೆ ಎಂದು ಅದಾನಿ ಗ್ರೂಪ್ ತಿಳಿಸಿದೆ.
ಅದಾನಿ ಗ್ರೂಪ್ 2022,ಮಾರ್ಚ್‌ನಲ್ಲಿ ಹಣಕಾಸು ಮಾಧ್ಯಮ ಸಂಸ್ಥೆ ಬಿಕ್ಯೂ ಪ್ರೈಮ್‌ನ ಒಡೆತನ ಹೊಂದಿರುವ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾವನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಮಾಧ್ಯಮ ಉದ್ಯಮವನ್ನು ಪ್ರವೇಶಿಸಿತ್ತು.