ಬೆಂಗಳೂರು:
ಮೈಸೂರು ಬ್ಯಾಂಕ್ ವೃತ್ತದಿಂದ ಎಸ್ ಜೆ ಪಿ ರಸ್ತೆಯನ್ನು ಸಂಪರ್ಕಿಸುವ ಸುಮಾರು 1.02 ಕಿ.ಮೀ ಉದ್ದದ ಅವೆನ್ಯೂ ರಸ್ತೆಯ ಸ್ಮಾರ್ಟ್ ಸಿಟಿ ಕಾಮಗಾರಿ ಯನ್ನು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಅಧ್ಯಕ್ಷರಾದ ರಾಕೇಶ್ ಸಿಂಗ್ ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಅವೆನ್ಯೂ ರಸ್ತೆಯ ಕಾಮಗಾರಿಯಲ್ಲಿ ಬೆಂಗಳೂರು ನೀರು ಸರಬರಾಜು ಮಂಡಳಿಯವರ ಕೋರಿಕೆಯಂತೆ ರಸ್ತೆಯ ಎರಡೂ ಬದಿಗಳಿಗೆ ಕುಡಿಯುವ ನೀರಿನ ಕೊಳವೆಗಳನ್ನು ಅಳವಡಿಸಬೇಕಾಗಿದ್ದು, ನಂತರ ಪಾದಚಾರಿ ಮಾರ್ಗವನ್ನು ನಿರ್ಮಿಸಬೇಕಾಗಿದೆ. ಮಾಡಬೇಕಾಗಿದೆ. ಮಾರ್ಚ್ ಅಂತ್ಯದೊಳಗೆ ಕಾಮಗಾರಿಗಳನ್ನು ಮುಗಿಸುವಂತೆ ರಾಕೇಶ್ ಸಿಂಗ್ ಅವರು ಗುತ್ತಿಗೆದಾರರಿಗೆ ಸೂಚಿಸಿದರು.
ಸಾರ್ವಜನಿಕರ ಓಡಾಟಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಹಗಲು ರಾತ್ರಿ ಕೆಲಸ ನಿರ್ವಹಿಸಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸುವಂತೆ ಸೂಚಿಸಿದರು.
ಸ್ಥಳೀಯ ವರ್ತಕರೊಂದಿಗೆ ಚರ್ಚಿಸಿದ ರಾಕೇಶ್ ಸಿಂಗ್
ಕರ್ನಾಟಕ ಫೆಡರೇಶನ್ ಆಫ್ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ್ ಮಂಡೋತ್ ಅವರು ಅವೆನ್ಯೂ ರಸ್ತೆಯ ದೊಡ್ಡಪೇಟೆ ವೃತ್ತದ ಸೌಂದರೀಕರಣ, ಫೈರ್ ಫೈಟಿಂಗ್ ಪಾಯಿಂಟ್ ಗಳ ಸ್ಥಾಪನೆ, ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಪಾದಚಾರಿ ಮಾರ್ಗದ ಅಭಿವೃದ್ಧಿ ಕುರಿತಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೂ ಆದ ರಾಕೇಶ್ ಸಿಂಗ್ ಅವರ ಗಮನ ಸೆಳೆದರು. ತಕ್ಷಣವೇ ಈ ಮನವಿಗೆ ಸ್ಪಂದಿಸಿದ ಅವರು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳವಂತೆ ಸ್ಮಾರ್ಟ್ ಸಿಟಿ ಅಭಿಯಂತರರಿಗೆ ಸೂಚಿಸಿದರು.
ಪರಿವೀಕ್ಷಣೆ ಸಮಯದಲ್ಲಿ ಬೆಂಗಳೂರು ಸ್ಮಾಟ್೯ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಮುಖ್ಯ ಇಂಜಿನಿಯರ್ ವಿನಾಯಕ ಸೂಗೂರ್, ವರ್ತಕರ ಸಂಘದ ಕೌಶಿಕ್, ಕಿಶೋರ್, ಪ್ರಕಾಶ್ ಪಿರ್ಗಾಲ, ಪುಸ್ತಕ ಅಂಗಡಿಗಳ ಸಂಘದ ರಮೇಶ್, ಶ್ರೀಧರ್ ಮೊದಲಾದವರು ಹಾಜರಿದ್ದರು.