ಬೆಂಗಳೂರು, ಫೆಬ್ರವರಿ 4: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ, ರಸ್ತೆ ಸುರಕ್ಷತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ನಡುವಿನ ಬಲವಾದ ಸಮನ್ವಯ ಅತ್ಯಗತ್ಯ ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ಹೇಳಿದ್ದಾರೆ.
ನಗರ ಪಾಲಿಕೆ, GAIL, ಸಂಚಾರ ಪೊಲೀಸ್, BESCOM, KPTCL, ಹಾಗೂ BWSSB ಉನ್ನತ ಅಧಿಕಾರಿಗಳೊಂದಿಗೆ ಆಯೋಜಿಸಲಾದ ಜಂಟಿ ಸಮನ್ವಯ ಸಭೆಯಲ್ಲಿ, ರಸ್ತೆ ಕಾಮಗಾರಿ, ಸಂಚಾರ ನಿರ್ವಹಣೆ, ನೀರು ನಿಲುಗಡೆ ಸಮಸ್ಯೆ ಮತ್ತು ಸಾರ್ವಜನಿಕ ಸುರಕ್ಷತೆ ಕುರಿತಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ರಸ್ತೆ ಕತ್ತರಿಕೆ ನೀತಿ ಮತ್ತು ತಂತ್ರಜ್ಞಾನ ಬಳಕೆ
ಇನ್ನು ಮುಂದೆ ರಸ್ತೆ ಕತ್ತರಿಕೆ ಹಾಗೂ ಇತರ ಸೇವಾ ಸಂಬಂಧಿತ ಅರ್ಜಿಗಳನ್ನು ಹೊಸ ‘MARCS’ ಪೋರ್ಟಲ್ ಮೂಲಕವೇ ಸಲ್ಲಿಸಬೇಕೆಂದು ಆಯುಕ್ತರು ತಿಳಿಸಿದರು. ಹಳೆಯ ವ್ಯವಸ್ಥೆಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನೂ ಸಹ MARCS ಮೂಲಕ ಮರುಸಲ್ಲಿಕೆ ಮಾಡಬೇಕು. ಪೋರ್ಟಲ್ನಲ್ಲಿರುವ ತಾಂತ್ರಿಕ ದೋಷಗಳನ್ನು ಶೀಘ್ರ ಸರಿಪಡಿಸಲಾಗುವುದು ಎಂದು ಭರವಸೆ ನೀಡಲಾಯಿತು.
ನಗರದ ಎಲ್ಲಾ ರಸ್ತೆಗಳ ಸಂಪೂರ್ಣ ಮಾಹಿತಿಗಾಗಿ ರಸ್ತೆ ಮಾಹಿತಿ ನಿರ್ವಹಣಾ ವ್ಯವಸ್ಥೆ (RIMS) ತಂತ್ರಾಂಶವನ್ನು ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುವುದು ಎಂದರು.
ಇಬ್ಲೂರು ಜಂಕ್ಷನ್ ಅಭಿವೃದ್ಧಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಸೂಚನೆಯಂತೆ, ಇಬ್ಲೂರು ಜಂಕ್ಷನ್ನಲ್ಲಿ ಅಂಡರ್ಪಾಸ್ ಮತ್ತು ಫ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದ ಎರಡು ಪ್ರಸ್ತಾಪಗಳಿವೆ. ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಇಲಾಖೆಗಳು ತಮ್ಮ ಯೋಜನೆಗಳ ವಿವರಗಳನ್ನು ಹಂಚಿಕೊಳ್ಳುವಂತೆ ಸೂಚಿಸಲಾಯಿತು.
ಇದನ್ನೂ ಓದಿ: ಇಬ್ಳೂರು ಜಂಕ್ಷನ್ ಬಳಿ ಹೊಸ ಫ್ಲೈಓವರ್ಗೆ ಬ್ಲೂಪ್ರಿಂಟ್ ಸಿದ್ಧಪಡಿಸಲು ಸೂಚನೆ; ORR ಸಮಗ್ರ ಅಭಿವೃದ್ಧಿಗೆ ಮಹೇಶ್ವರ ರಾವ್ ನಿರ್ದೇಶನ
ಇಲ್ಲಿಗೆ ಸಂಬಂಧಿಸಿದಂತೆ GAIL ಸಂಸ್ಥೆ 8 ಇಂಚಿನ ಮಧ್ಯಮ ಒತ್ತಡದ ಗ್ಯಾಸ್ ಪೈಪ್ಲೈನ್ ಅಳವಡಿಸಿರುವುದನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಇಲಾಖೆಗಳ ಜಂಟಿ ಸಮೀಕ್ಷೆ ನಡೆಸಿ ಯೋಜನೆ ಸಾಧ್ಯತೆ ಕುರಿತು ವರದಿ ಸಲ್ಲಿಸಲು ಆಯುಕ್ತರು ನಿರ್ದೇಶಿಸಿದರು.
ವಿಪ್ರೋ ಮತ್ತು ಕೈಕೊಂಡ್ರಹಳ್ಳಿ ಜಂಕ್ಷನ್ ಸಂಚಾರ ಸಮಸ್ಯೆ
ಸರ್ಜಾಪುರ ರಸ್ತೆಯ ವಿಪ್ರೋ ಜಂಕ್ಷನ್ನಲ್ಲಿ, ಯು-ಟರ್ನ್ ಅಭಿವೃದ್ಧಿ ಮತ್ತು ಬಸ್ ತಂಗುದಾಣ ಸ್ಥಳಾಂತರದ ಮೂಲಕ ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಕೈಕೊಂಡ್ರಹಳ್ಳಿ ಜಂಕ್ಷನ್ನಲ್ಲಿ, ಎಲಿಮೆಂಟ್ಸ್ ಅಪಾರ್ಟ್ಮೆಂಟ್ ಬಳಿ ಕಾಂಪೌಂಡ್ ಗೋಡೆ ತೆರವುಗೊಳಿಸಿ ಸಣ್ಣ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಖಾಲಿ ಜಾಗದಲ್ಲಿ ಬಸ್ ಬೇ ನಿರ್ಮಾಣ ಕುರಿತು ಚರ್ಚಿಸಲಾಯಿತು.
BWSSB ಪೈಪ್ಲೈನ್ ಮತ್ತು ರಸ್ತೆ ಮರುಸ್ಥಾಪನೆ
ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಬಳಿ ನಡೆಯುತ್ತಿರುವ BWSSB ಪೈಪ್ಲೈನ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಯಿತು. ಕಾಮಗಾರಿ ನಂತರ ರಸ್ತೆ ಸರಿಯಾಗಿ ಮರುಸ್ಥಾಪನೆ ಆಗದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿ, ತಕ್ಷಣ ರಸ್ತೆ ದುರಸ್ತಿ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಸಂಚಾರ ಪೊಲೀಸ್ ಶಿಫಾರಸುಗಳು
- ನೀರು ನಿಲುಗಡೆ ಸಮಸ್ಯೆ: ಇಬ್ಲೂರಿನ ಮಣಿಪಾಲ್ ಕೌಂಟಿ ಬಳಿ ಚರಂಡಿ ನಿರ್ಮಾಣ ಮತ್ತು ಅಗರ ಕೆರೆ ಸುತ್ತ ನೀರಿನ ಹರಿವು ಸುಧಾರಣೆ
- ರಸ್ತೆ ಸುರಕ್ಷತೆ: ಅಗರ–ಆನೆಪಾಳ್ಯ ಅಪಘಾತ ವಲಯದಲ್ಲಿ ಮೀಡಿಯನ್ ಎತ್ತರ ಹೆಚ್ಚಿಸುವುದು, ಕಸವನಹಳ್ಳಿ ರಸ್ತೆಯಲ್ಲಿ ಮೀಡಿಯನ್ ಅಳವಡಿಕೆ, ಜಿಬ್ರಾ ಕ್ರಾಸಿಂಗ್, ಸ್ಟಾಪ್ ಲೈನ್ ಹಾಗೂ ಸಿಗ್ನಲ್ ಫಲಕಗಳು
- ಹೂಳೆತ್ತುವಿಕೆ: ಸಿಲ್ಕ್ ಬೋರ್ಡ್, ಇಬ್ಲೂರು ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಮತ್ತು ಬನ್ನೇರುಘಟ್ಟ ರಸ್ತೆ ರಾಜಕಾಲುವೆಗಳಲ್ಲಿ ತಕ್ಷಣ ಹೂಳೆತ್ತುವಿಕೆ
ಆಯುಕ್ತರ ಕಟ್ಟುನಿಟ್ಟಿನ ನಿರ್ದೇಶನ
ಸಭೆಯಲ್ಲಿ ಮಾತನಾಡಿದ ಆಯುಕ್ತ ಕೆ.ಎನ್. ರಮೇಶ್ ಅವರು, ಸಂಚಾರ ಪೊಲೀಸ್ ಶಿಫಾರಸುಗಳನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸಬೇಕು ಎಂದು ಇಂಜಿನಿಯರಿಂಗ್ ವಿಭಾಗಕ್ಕೆ ಸೂಚಿಸಿದರು.
ಪ್ರತಿ ಉಪವಿಭಾಗ ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಸಂಯುಕ್ತ ಟಾಸ್ಕ್ ಫೋರ್ಸ್ ರಚನೆ ಅಗತ್ಯ ಎಂದು ತಿಳಿಸಿ, ತ್ವರಿತ ಸಂವಹನಕ್ಕಾಗಿ ವಾಟ್ಸಾಪ್ ಗುಂಪು ರಚಿಸಲು ನಿರ್ದೇಶಿಸಿದರು.
ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತ ನವೀನ್ ಕುಮಾರ್ ರಾಜು, ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಗೋಪಾಲ್, ಮುಖ್ಯ ಅಭಿಯಂತರರಾದ ಬಸವರಾಜ ಕಬಾಡೆ, ಕೆ.ವಿ. ರವಿ, ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
