ಬೆಳಗಾವಿ:
7ನೇ ವೇತನ ಆಯೋಗ ಶಿಫಾರಸುಗಳನ್ನು ಬಿಜೆಪಿಯವರು ಜಾರಿಗೆ ಮಾಡದಿದ್ದರೆ ನಾವು ಅಧಿಕಾರಕ್ಕೆ ಬಂದಾಗ ಜಾರಿಗೆ ತರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಳಗಾವಿಯಲ್ಲಿಂದು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಒಂದು ವೇಳೆ ಬಿಜೆಪಿಯವರು ಮಾಡದೇ ಇದ್ದರೆ, ನಾವು ಅಧಿಕಾರಕ್ಕೆ ಬಂದು 7ನೇ ವೇತನ ಆಯೋಗ ವರದಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.
“ಒಂದು ವೇಳೆ ಬಿಜೆಪಿಯವರು ಮಾಡದೇ ಹೋದ್ರೆ, ನಾವು ಬಂದ್ಮೇಲೆ ಮಾಡ್ತೀವಿ. ಐದು ವರ್ಷಗಳ ಹಿಂದೆ ನೌಕರರಿಗೆ ಆರನೇ ವೇತನ ಆಯೋಗ ಜಾರಿ ಮಾಡಿದ್ದೇನೆ. 10,600 ಕೋಟಿ ಹೊರೆಯಾದರೂ ನಾನು ಮಾಡಿದ್ದೆ. 6ನೇ ವೇತನ ಆಯೋಗ ವರದಿ ಅನೌನ್ಸ್ ಮಾಡಿದ್ದೆ. ಎಲೆಕ್ಷನ್‌ಗೂ ಮುನ್ನ ಜಾರಿಗೆ ತಂದಿದ್ದೇನೆ. ಬಿಜೆಪಿಯವರು ಸುಮ್ಮನೇ ದುಡ್ಡು ಇಟ್ಟಿದ್ದೀವಿ ಅಂತಾ ಹೇಳ್ತಾರೆ. ಎಲ್ಲಿ ದುಡ್ಡು ಇಟ್ಟಿದ್ದಾರೆ? 7ನೇ ವೇತನ ಆಯೋಗ ವರದಿ ಜಾರಿಗೆ ಅಗತ್ಯ ಇರುವಷ್ಟು ದುಡ್ಡು ಇಟ್ಟಿಲ್ಲ. ಕೂಡಲೇ ಮಧ್ಯಂತರ ವರದಿ ಪಡೆದು 7ನೇ ವೇತನ ಆಯೋಗ ವರದಿ ಜಾರಿ ಮಾಡಬೇಕಿತ್ತು. ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ, ಸುಳ್ಳು ಹೇಳುತ್ತಾರೆ. ಸುಳ್ಳು ಹೇಳಿ ಮೂಗಿಗೆ ತುಪ್ಪ ಸವರೋದು ಇವರ ಕೆಲಸವಾಗಿದೆ,” ಎಂದು ಟೀಕಿಸಿದರು.