Home ಬೆಂಗಳೂರು ನಗರ ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಮತ್ತೆ ನೀಡುತ್ತೇವೆ, ಆತಂಕಪಡುವ ಅಗತ್ಯವಿಲ್ಲ : ಡಿ.ಕೆ.ಶಿವಕುಮಾರ್

ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಮತ್ತೆ ನೀಡುತ್ತೇವೆ, ಆತಂಕಪಡುವ ಅಗತ್ಯವಿಲ್ಲ : ಡಿ.ಕೆ.ಶಿವಕುಮಾರ್

6
0

ಬೆಂಗಳೂರು, ನ.20: “ನಮ್ಮ ಸರ್ಕಾರ ಇರುವುದೇ ಬಡವರಿಗಾಗಿ. ಬಡವರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅವರಿಗೆ ಮತ್ತೆ ನೀಡುತ್ತೇವೆ. ಅರ್ಹರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಯ ನೀಡಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

ಆರ್ಹರ ಬಿಪಿಎಲ್ ಕಾರ್ಡ್ ಗಳು ಕೂಡ ರದ್ದಾಗುತ್ತಿವೆ ಎಂದು ಮಾಧ್ಯಮಗಳು ಕೇಳಿದಾಗ, “ಬಿಪಿಎಲ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ಕೆಲವು ಮಾನದಂಡ ನಿಗದಿಪಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಹರ ಕಾರ್ಡ್ ರದ್ದಾಗಿದ್ದರೆ ಅವರಿಂದ ಮತ್ತೆ ಅರ್ಜಿ ಪಡೆದು ಮತ್ತೆ ಬಿಪಿಎಲ್ ಕಾರ್ಡ್ ನೀಡಲಾಗುವುದು. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಕೆಲವು ಕಡೆ ಹೆಚ್ಚುಕಮ್ಮಿಯಾಗಿದ್ದು, ಎಲ್ಲವನ್ನು ಬಗೆಹರಿಸುತ್ತೇವೆ. ದಯಮಾಡಿ ಸಹಕಾರ ನೀಡಿ. ಸರ್ಕಾರಿ ನೌಕರರು, ಸಹಕಾರಿ ಸಂಘಗಳ ಅಧಿಕಾರಿಗಳು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಹೊಂದಿರುವ ಹಿನ್ನೆಲೆಯಲ್ಲಿ ಈ ಪರಿಷ್ಕರಣೆ ಮಾಡಲಾಗುತ್ತಿದೆ” ಎಂದರು.

ಕಾರ್ಡ್ ನೀಡುವಾಗ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ, ಅದೇ ರೀತಿ ಕಾರ್ಡ್ ರದ್ದು ಮಾಡುವಾಗ ಮಾಡಬಹುದಲ್ಲವೇ ಎಂದು ಕೇಳಿದಾಗ, “ಈ ವಿಚಾರವಾಗಿ ಮುಖ್ಯಮಂತ್ರಿಗಳು ಸಂಬಂಧಪಟ್ಟ ಸಚಿವರ ಜತೆ ಚರ್ಚೆ ಮಾಡಿ ನಿರ್ದೇಶನ ನೀಡಿದ್ದಾರೆ. ಯಾರ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ಆಯಾ ಕ್ಷೇತ್ರಗಳ ಶಾಸಕರಿಗೆ ಪಟ್ಟಿ ರವಾನಿಸುತ್ತೇವೆ. ಅವರು ಒಂದು ತಂಡ ರಚಿಸಿ ಯಾವ ಅರ್ಹರಿಗೆ ಕಾರ್ಡ್ ರದ್ದಾಗಿದೆ ಎಂದು ಪರಿಶೀಲನೆ ಮಾಡುತ್ತಾರೆ. ಇನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ತಂಡದವರಿಗೂ ಮನೆ ಮನೆಗೆ ಹೋಗಿ, ಯಾರಿಗಾದರೂ ಅನ್ಯಾಯ ಆಗಿದ್ದರೆ ಅದನ್ನು ಸರಿಪಡಿಸುವಂತೆ ಜವಾಬ್ದಾರಿ ನೀಡಲಾಗುವುದು” ಎಂದು ತಿಳಿಸಿದರು.

ಕೆಲವು ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಕೇಳಿದಾಗ, “ಈ ವಿಚಾರವನ್ನು ಮುಖ್ಯಮಂತ್ರಿಗಳು ಮಾತನಾಡಲಿದ್ದಾರೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here