ಬೆಂಗಳೂರು, ಫೆ.18: ಕಸ ವಿಲೇವಾರಿ ಕಾರ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಅಗತ್ಯ ಸೇವೆಗಳ ಕಾಯ್ದೆ (ಎಸ್ಮಾ) ಅಡಿ ಯಾವುದೇ ಕರುಣೆ ಇಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಶಾಸಕರು ಮತ್ತು ಮುಖಂಡರು ಅಡ್ಡಿಪಡಿಸಿದರೆ ಅವರ ಮನೆ ಅಥವಾ ಬಿಜೆಪಿ ಕಚೇರಿ ಮುಂದೆ ಕಸ ಸುರಿಸಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಅವರು ತೀವ್ರವಾಗಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹದೇವಪುರದಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸುವ ಬಗ್ಗೆ ಪ್ರಶ್ನೆಗೆ ಉತ್ತರಿಸಿ, ಕೆಲವು ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯಲು ಸರ್ಕಾರವನ್ನು ‘ಬ್ಲ್ಯಾಕ್ಮೇಲ್’ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಂಗಳವಾರ ಅರವಿಂದ ಲಿಂಬಾವಳಿ ಹಾಗೂ ಬುಧವಾರ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಹೇಳಿದರು.
“ಕಸವನ್ನು ಎಲ್ಲಾದರೂ ಹಾಕಲೇಬೇಕು. ತಮ್ಮ ಕ್ಷೇತ್ರದಲ್ಲಿ ಬಿಡದಿದ್ದರೆ ಕಸವನ್ನು ಆರ್.ಅಶೋಕ್, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿ ಎದುರು ಕಳುಹಿಸಬೇಕಾಗುತ್ತದೆ,” ಎಂದು ಡಿಸಿಎಂ ಪ್ರಶ್ನಿಸಿದರು.
ಕಸದ ಲಾರಿಗಳ ಅಪಘಾತವನ್ನು ಕಾರಣವಾಗಿ ತೋರಿಸಿ ವಿರೋಧಿಸುತ್ತಿರುವ ಬಗ್ಗೆ ಕೇಳಿದಾಗ, “ಅಪಘಾತಗಳು ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ ಅದಕ್ಕಾಗಿ ಕಸ ವಿಲೇವಾರಿ ನಿಲ್ಲಿಸುವುದು ಸರಿಯಲ್ಲ. ಎಸ್.ಟಿ. ಸೋಮಶೇಖರ್, ಶಿವಣ್ಣ, ಕೃಷ್ಣಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ನಡೆಯುತ್ತಿದೆ,” ಎಂದು ತಿಳಿಸಿದರು.
ಇದೇ ವೇಳೆ, ಹೊಸದಾಗಿ ಎರಡು ಜಾಗಗಳನ್ನು ಕಸ ವಿಲೇವಾರಿಗಾಗಿ ಖರೀದಿಸಲಾಗಿದೆ. ಕಾನೂನಿನ ಪ್ರಕಾರ ಟೆಂಡರ್ ಕರೆಯಲಾಗಿದೆ. ಅಗತ್ಯ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ನಗರದಲ್ಲಿ ಕಸ ನಿರ್ವಹಣೆ ವಿಚಾರವಾಗಿ ರಾಜಕೀಯ ವಾಗ್ವಾದ ತೀವ್ರಗೊಂಡಿರುವ ಸಂದರ್ಭದಲ್ಲಿ ಡಿಸಿಎಂ ನೀಡಿದ ಈ ಕಠಿಣ ಹೇಳಿಕೆ ಗಮನ ಸೆಳೆದಿದೆ.
