ಬೆಂಗಳೂರು: ರಂಜಾನ್ ಹಬ್ಬದ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ನಡೆಯುತ್ತಿರುವುದಾಗಿ ವರದಿಗಳು ತಿಳಿಸುತ್ತವೆ. ಕೆಲವು ಸ್ಥಳಗಳಲ್ಲಿ ರಸ್ತೆ ಬದಿಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳ ವಧೆ ನಡೆಯುವುದು ಕಂಡುಬಂದಿದ್ದು, ಇದರಿಂದ ಸಾರ್ವಜನಿಕ ಆರೋಗ್ಯ, ಪರಿಸರ ಮತ್ತು ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಈಗಾಗಲೇ ಗೋಹತ್ಯೆಯನ್ನು ತಡೆಯಲು ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ, ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ರಾಜ್ಯ ಗೃಹ ಸಚಿವರಿಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ರಾಜ್ಯ ಸಂಯೋಜಕರಾದ ಮೋಹನ್ ಗೌಡ, ಶ್ರೀರಾಮ ಸೇನೆಯ ಸುಂದ್ರೇಶ್ ನರ್ಗಲ್, ಹಿಂದೂ ಮುಖಂಡ ಸಂತೋಷ್ ಕರ್ತಾಳ್, ಅಡ್ವೋಕೇಟ್ ತ್ಯಾಗರಾಜ್, ಡಾ. ನಾಗೇಂದ್ರಪ್ಪ ಸೇರಿದಂತೆ ಹಲವಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಅಕ್ರಮ ಗೋಹತ್ಯೆ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿರುವ ಹಿಂದೂ ಸಂಘಟನೆಗಳು, ರಂಜಾನ್ ಹಬ್ಬದ ಸಮಯದಲ್ಲಿ ವಿಶೇಷ ಪೊಲೀಸ್ ನಿಗಾ ವ್ಯವಸ್ಥೆ ರೂಪಿಸುವ, ಚೆಕ್ ಪೋಸ್ಟ್ಗಳಲ್ಲಿ ಪರಿಶೀಲನೆ ನಡೆಸುವ, ಕಸಾಯಿಖಾನೆಗಳ ನಿಯಮ ಪಾಲನೆ ಖಚಿತಪಡಿಸುವಂತೆ ಸರ್ಕಾರಕ್ಕೆ ಬೇಡಿಕೆ ಹಾಕಿವೆ.
ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಶಾಂತಿಯನ್ನು ಕಾಪಾಡಲು ಈ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಅವರು ಒತ್ತಿಸಿದ್ದಾರೆ.
