ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಫ್ಲೆಕ್ಸ್, ಹೋರ್ಡಿಂಗ್ಸ್ ಹಾವಳಿ ಹೆಚ್ಚಾದ ಹಿನ್ನೆಲೆ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ.
ಪ್ಲೆಕ್ಸ್- ಹೋರ್ಡಿಂಗ್ಸ್ ತಡೆಯಲು ಕ್ರಮ ಕೈಗೊಳ್ಳದ ಬಿಬಿಎಂಪಿ, ಪೊಲೀಸ್ ಇಲಾಖೆಯನ್ನು ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ರಾಜ್ಯದಲ್ಲಿ 6.8 ಲಕ್ಷ ಅಕ್ರಮ ಜಾಹಿರಾತುಗಳಿವೆ ಎಂಬ ವರದಿಯಿದೆ.
ರಸ್ತೆಗಳಲ್ಲಿ ಅಕ್ರಮ ಹೋರ್ಡಿಂಗ್‌ಗಳ ಹಾವಳಿ ಮುಂದುವರಿದಿದ್ದು, ಅಕ್ರಮ ಜಾಹಿರಾತುಗಳಿಂದಾಗಿ ಪಾದಚಾರಿಗಳಿಗೆ ಸಮಸ್ಯೆ ಉಂಟಾಗಿದೆ, ಹಿಂದೆ ಕೋರ್ಟ್ ಆದೇಶಗಳಿದ್ದರೂ ಸಂಬಂಧಪಟ್ಟ ಪ್ರಾಧಿಕಾರಗಳು ಪಾಲಿಸಿಲ್ಲ. ನ್ಯಾಯಾಂಗ ನಿಂದನೆ ಏಕೆ ದಾಖಲಿಸಬಾರದೆಂದು ನೋಟಿಸ್ ಜಾರಿಗೊಳಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರು, ಪೊಲೀಸ್ ಆಯುಕ್ತರಿಗೆ ನೋಟಿಸ್ ನೀಡಿರುವ ಹೈಕೋರ್ಟ್, ಜುಲೈ.26ರೊಳಗೆ ಉತ್ತರಿಸುವಂತೆ ಆದೇಶಿಸಿದೆ.
ಸರಕಾರದ ಅನುಮೋದನೆಯೊಂದಿಗೆ ಜಾಹಿರಾತು ನಿಯಮ ರೂಪಿಸಲಾಗಿದೆ. ಬಿಬಿಎಂಪಿ ಜಾಹಿರಾತು ಸಂಬಂಧ ಕರಡು ಬೈಲಾ ಪ್ರಕಟಿಸಬೇಕಿದೆ ಎಂದು ಹೈಕೋರ್ಟ್‌ಗೆ ಎಎಜಿ ಪ್ರತಿಮಾ ಹೊನ್ನಾಪುರ ಮಾಹಿತಿ ನೀಡಿದರು. ಅಕ್ರಮ ಜಾಹಿರಾತು ತಡೆಗೆ ವಿಫಲವಾದರೆ 1 ಲಕ್ಷ ರೂ. ದಂಡ ವಿಧಿಸಬೇಕೆಂಬ ಆದೇಶವಿದೆ. ಆದರೂ ಕೋರ್ಟ್ ಆದೇಶ ಪಾಲಿಸಲು ಬಿಬಿಎಂಪಿ ನಿರ್ಲಕ್ಷ್ಯವಹಿಸಿದೆ. ಫ್ಲೆಕ್ಸ್ ಹಾವಳಿ ತಡೆಯಲು ಸದಾಕಾಲವೂ ಸನ್ನದ್ಧವಾಗಿರಬೇಕು ಎಂದು ಹೈಕೋರ್ಟ್ ಸೂಚನೆ ನೀಡಿ, ವಿಚಾರಣೆ ಮುಂದೂಡಿದೆ.