ಬೆಂಗಳೂರು:
ಕಳೆದ ನಾಲ್ಕು ವರ್ಷದಲ್ಲಿ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ಏಕ ವ್ಯಕ್ತಿ ಆಯೋಗಕ್ಕೆ ವರದಿ ಸಲ್ಲಿಸಲು 45 ದಿನಗಳ ಗಡುವು ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ರಾಜ್ಯ ಸರಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕವ್ಯಕ್ತಿ ಆಯೋಗ ರಚಿಸಿ 2023ರ ಆ.5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೆರ್ಸಸ್ ನಿಕ್ಷೇಪ್ ಇನ್ಫ್ರಾ ಪ್ರಾಜೆಕ್ಟ್ಸ್ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
2019-20ರಿಂದ 2022-23ರವರೆಗೆ ಬಿಬಿಎಂಪಿ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳು ಗುತ್ತಿಗೆದಾರರಿಗೆ ವಹಿಸಿದ ಎಲ್ಲ ಗುತ್ತಿಗೆ ಕಾಮಗಾರಿಗಳ ತನಿಖೆಗೆ ರಾಜ್ಯ ಸರಕಾರವು ವಿಶೇಷ ತನಿಖಾ ಘಟಕವನ್ನು (ಎಸ್‍ಐಟಿ) ರಚಿಸಿದೆ. ಎಸ್‍ಐಟಿಯ ರಚನೆಯ ಸಿಂಧುತ್ವವನ್ನು ಈ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗಿದೆ. ಎಸ್‍ಐಟಿ ರಚನೆಯ ನಂತರ ಯಾವುದೇ ಪ್ರಕ್ರಿಯೆಗಳೂ ನಡೆದಿಲ್ಲ. ಇದರ ಬೆನ್ನಲ್ಲೆಯೇ 2019ರಿಂದ 2023ರವರೆಗೆ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ಏಕವ್ಯಕ್ತಿ ಆಯೋಗವನ್ನು ರಚಿಸಲಾಗಿದೆ. ಅಲ್ಲಿಯೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಡಿಸೆಂಬರ್ 19ಕ್ಕೆ ನಿಗದಿಪಡಿಸಿದೆ.