Home ರಾಜಕೀಯ ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಚನ್ನಪಟ್ಟಣ ಕ್ಷೇತ್ರದ ಚಿತ್ರಣ ಬದಲು: ಡಿಸಿಎಂ...

ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಚನ್ನಪಟ್ಟಣ ಕ್ಷೇತ್ರದ ಚಿತ್ರಣ ಬದಲು: ಡಿಸಿಎಂ ಡಿ.ಕೆ. ಶಿವಕುಮಾರ್

10
0
The image of Bangalore South district and Channapatna constituency will change in the next three years: DCM D.K. Shivakumar

ಚನ್ನಪಟ್ಟಣ, ಫೆ.02: “ಮತದಾರರು ಈ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಕ್ತಿ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ನಾಯಕರು ಸೇರಿ ಚನ್ನಪಟ್ಟಣ ಹಾಗೂ ಇಡೀ ಜಿಲ್ಲೆಯ ಚಿತ್ರಣ ಬದಲಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಚನ್ನಪಟ್ಟಣದಲ್ಲಿ ನಡೆದ “ಕೃತಜ್ಞತಾ ಸಮಾವೇಶ”ದಲ್ಲಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಮಾತನಾಡಿದರು.

“ಇದು ಋಣ ತೀರಿಸುವ ಕಾರ್ಯಕ್ರಮ. ನೀವು ನಮಗೆ ಕೊಟ್ಟ ಶಕ್ತಿಗೆ ಅಭಿನಂದನೆ ಸಲ್ಲಿಸಲು ಈ ಕಾರ್ಯಕ್ರಮ ಮಾಡಿದ್ದೇವೆ. ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು 2 ಬಾರಿ ಮುಂದೂಡಲಾಗಿತ್ತು. ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ಕಾಲಿಗೆ ಪೆಟ್ಟಾಗಿದ್ದು, ವೈದ್ಯರ ಸಲಹೆ ಮೇರೆಗೆ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ” ಎಂದು ತಿಳಿಸಿದರು.

“ಈ ಚುನಾವಣೆಯಲ್ಲಿ ಹಗಲು ರಾತ್ರಿ ಶ್ರಮಿಸಿದ ಎಲ್ಲಾ ನಾಯಕರು, ಮಂತ್ರಿಗಳು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಅಭಿವೃದ್ಧಿಗೆ ಮತ ಕೊಟ್ಟಿದ್ದೀರಿ. ನಾನು 1989ರಿಂದ ಈ ಜಿಲ್ಲೆಯ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ಸ್ಥಾನಗಳನ್ನು ಗೆಲ್ಲಿಸಿದ್ದೀರಿ” ಎಂದರು.

ನಮ್ಮನ್ನು ಟೀಕಿಸಿದವರಿಗೆ ತಟ್ಟೆ ಮರೆ ಏಟಿನ ಉತ್ತರ:

“ನಾನು ಯಾರನ್ನೂ ಟೀಕಿಸುವ ಅಗತ್ಯವಿಲ್ಲ. ನಮ್ಮನ್ನು ಅಪೂರ್ವ ಸಹೋದರರು ಎಂದವರು, ನಮ್ಮ ಬಗ್ಗೆ ತುಚ್ಛವಾಗಿ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಾಗೂ ದಳದ ಎಲ್ಲ ನಾಯಕರಿಗೆ ನಿಮ್ಮ ತಟ್ಟೆ ಮರೆ ಏಟು ಉತ್ತರವಾಗಿದೆ. ನೀವು ಕೇವಲ ಚನ್ನಪಟ್ಟಣಕ್ಕೆ ಮಾತ್ರ ಉತ್ತರ ನೀಡಿಲ್ಲ, ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದೀರಿ. ನಮ್ಮ ಅಧಿಕಾರ ನಶ್ವರ, ನಾವು ಮಾಡುವ ಸಾಧನೆ ಅಜರಾಮರ, ಮತದಾರರೇ ಈಶ್ವರ” ಎಂದು ಹೇಳಿದರು.

“ಈ ಕ್ಷೇತ್ರದಲ್ಲಿ ಶಾಸಕ ಸ್ಥಾನ ಖಾಲಿಯಾದ ಬಳಿಕ, ನಾನು ಕ್ಷೇತ್ರದ ಪ್ರತಿ ಹೋಬಳಿಗೆ ಬಂದು ಮನೆ ಬಾಗಿಲಿಗೆ ಸರ್ಕಾರವನ್ನು ತಂದು 25 ಸಾವಿರಕ್ಕೂ ಹೆಚ್ಚು ಜನರ ಅರ್ಜಿ ಸ್ವೀಕರಿಸಿದ್ದೇನೆ. 19 ಸಾವಿರಕ್ಕೂ ಹೆಚ್ಚು ಜನ ಮನೆ, ನಿವೇಶನ, ಪಹಣಿ ಇಲ್ಲ ಎಂದು ಅರ್ಜಿ ಸಲ್ಲಿಸಿದ್ದೀರಿ. ಚುನಾವಣೆಗೂ ಮುನ್ನ ಈ ಕ್ಷೇತ್ರ ನನ್ನ ಜವಾಬ್ದಾರಿ ಎಂದು ಮಾತು ಕೊಟ್ಟಿದ್ದೆ. ನಾನು ಈಗಲೂ ಹೇಳುತ್ತೇನೆ. ಇಲ್ಲಿ ಯೋಗೇಶ್ವರ್ ಮಾತ್ರವಲ್ಲ, ನಾನು ಕೂಡ ಕ್ಷೇತ್ರದ ಅಭ್ಯರ್ಥಿಯೇ. ನಾನು ಯೋಗೇಶ್ವರ್, ಬಾಲಕೃಷ್ಣ, ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ, ರವಿ, ರಾಮೋಜಿ ಗೌಡ ಸೇರಿ ಡಿ.ಕೆ. ಸುರೇಶ್ ಅವರ ಸಹಕಾರದಲ್ಲಿ ಜಿಲ್ಲೆಯಲ್ಲಿ ಬದಲಾವಣೆ ತರುತ್ತೇವೆ” ಎಂದು ಭರವಸೆ ನೀಡಿದರು.

“ನಾನು ಮುಂದಿನ ಒಂದು ವಾರದಲ್ಲಿ ಮತ್ತೆ ಕ್ಷೇತ್ರಕ್ಕೆ ಬಂದು ಕೊಟ್ಟ ಮಾತು ಈಡೇರಿಸುವ ಕೆಲಸದ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಚುನಾವಣೆ ಸಮಯದಲ್ಲಿ ನಾನು ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದೆ. ನೀವು ಶಾಸಕರಾಗಿ ಮುಖ್ಯಮಂತ್ರಿಯಾಗಿ ಯಾವ ಸಾಧನೆ ಮಾಡಿದ್ದೀರಿ ಎಂದು. ಯೋಗೇಶ್ವರ್ ಅವರು ಅನೇಕ ದೇವಾಲಯ ಕಟ್ಟಿಸಿದ್ದಾರೆ, ನೀವು ಯಾವ ದೇವಾಲಯ ಕಟ್ಟಿದ್ದೀರಿ, ಶಾಲೆಗಾಗಿ ನೀವು 2 ಎಕರೆ ಜಮೀನು ದಾನ ಮಾಡಿದ್ದೀರಾ ಎಂದು ಸವಾಲು ಹಾಕಿದ್ದೆ. ನನ್ನ ಪ್ರಶ್ನೆಗೆ ಅವರಿಂದ ಉತ್ತರ ಬರಲಿಲ್ಲ” ಎಂದರು.

ಸುರೇಶ್ ಅವರ ಸವಾಲನ್ನು ನಾಲ್ಕು ಶಾಸಕರು ಸ್ವೀಕರಿಸುತ್ತೇವೆ

“ಈಗ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆ ಸಮಯದಲ್ಲಿ ನಾವು ಜ್ಯೋತಿ ಬೆಳಗುವಾಗ, ನೀವು ನಾಲ್ಕು ಜನ ಶಾಸಕರು ಸೇರಿ ಏನು ಸಾಧನೆ ಮಾಡುತ್ತೀರಿ ನೋಡುತ್ತೇವೆ ಎಂದು ಸುರೇಶ್ ಸವಾಲು ಹಾಕಿದ್ದಾರೆ. ನಾವೆಲ್ಲರೂ ಶಾಸಕರು ಸೇರಿ ಈ ಸವಾಲು ಸ್ವೀಕರಿಸಬೇಕು” ಎಂದರು.

“ಚನ್ನಪಟ್ಟಣದ ಮತದಾರರಿಗೆ ಮಂಕು ಬೂದಿ ಎರಚಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿದ್ದೀರಿ. ನಮ್ಮ ಮೇಲೆ ಹಾಗೂ ಗ್ಯಾರಂಟಿ ಯೋಜನೆಗೆ ಮತ ನೀಡಿದ್ದೀರಿ. ಈ ಕ್ಷೇತ್ರಕ್ಕೆ ಈಗಾಗಲೇ 600 ಕೋಟಿ ರೂಪಾಯಿ ಅನುದಾನ ತಂದು ಕೆಲಸ ಆರಂಭಿಸಿದ್ದೇವೆ. ಚುನಾವಣೆಗೆ ಬಂದಾಗ ಅಭಿವೃದ್ಧಿ ಬೇಕೋ, ಕಣ್ಣೀರು ಬೇಕೋ ನಿರ್ಧಾರ ಮಾಡಿ ಎಂದು ನಿಮ್ಮ ಹತ್ತಿರ ಮನವಿ ಮಾಡಿದ್ದೆ. ನೀವು ಅಭಿವೃದ್ಧಿಯನ್ನೇ ಆಯ್ಕೆ ಮಾಡಿದ್ದೀರಿ” ಎಂದರು.

“ಚುನಾವಣೆ ಸಮಯದಲ್ಲಿ ಜೆಡಿಎಸ್ ನಾಯಕರು ಭಾವನಾತ್ಮಕವಾಗಿ ನಿಮ್ಮನ್ನು ಸೆಳೆಯುವ ಪ್ರಯತ್ನ ಮಾಡಿದರು. ಕಣ್ಣೀರು ಹಾಕಿದ್ದರು. ಭಾವನಾತ್ಮಕವಾಗಿ ನಿಮ್ಮನ್ನು ಬ್ಲಾಕ್ ಮೇಲ್ ಮಾಡಲು ನೋಡಿದ್ದರು. ಆದರೆ ನೀವು ಜಗ್ಗಲಿಲ್ಲ, ಬಗ್ಗಲಿಲ್ಲ” ಎಂದರು.

“ದೇವರು ವಾರ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ ಎಂದು ನಾನು ಹೇಳುತ್ತಿರುತ್ತೇನೆ. ಈಗ ನೀವು ನಮಗೆ ಅವಕಾಶ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಕ್ಷೇತ್ರದಲ್ಲಿ ಬದಲಾವಣೆ ಮಾಡಲು ನಾವು ಸಾಧನೆ ಮಾಡಲು ರೂಪುರೇಷೆ ನಿರ್ಮಿಸಬೇಕು. ನಾನು ಆಕಾಶವನ್ನು ಧರೆಗೆ ಇಳಿಸುತ್ತೇನೆ ಎಂದು ಹೇಳುವುದಿಲ್ಲ. ನಿಮ್ಮ ಕಣ್ಣಿಗೆ ಕಾಣುವ ಬದಲಾವಣೆ ತರುತ್ತೇವೆ” ಎಂದು ಹೇಳಿದರು.

“ಹಾಲು ಉತ್ಪಾದಕರ ಸಮಸ್ಯೆ ನಮ್ಮ ಗಮನದಲ್ಲಿ ಇದೆ. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಮಾಡುತ್ತೇವೆ. ನೀವು ಹಣಕ್ಕೆ ಬೆಲೆ ಕೊಡಲಿಲ್ಲ, ಗುಣಕ್ಕೆ ಬೆಲೆ ಕೊಟ್ಟಿದ್ದೀರಿ” ಎಂದು ಹೇಳಿದರು.

“ನಾನು ಆರಂಭದಲ್ಲಿ ಇಲ್ಲಿಗೆ ಬಂದಾಗ ನೀವು ತೋರಿದ ಪ್ರೀತಿ ವಿಶ್ವಾಸ ಮರೆಯುವುದಿಲ್ಲ. ನಾನು ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿ ನಮ್ಮ ಜನರನ್ನು ಕಾಪಾಡು ಎಂದು ಬೇಡಿಕೊಂಡಿದ್ದೆ. ರಾಮನ ತಂದೆ ದಶರಥನ ದೇವಾಲಯಕ್ಕಿಂತ ರಾಮನ ಭಂಟ ಆಂಜನೇಯನ ದೇವಾಲಯ ನಮ್ಮಲ್ಲಿ ಹೆಚ್ಚಿವೆ. ಆಂಜನೇಯ ರಾಮನ ಸೇವಕ, ಸೇವೆಯನ್ನು ಸಮಾಜ ಗುರುತಿಸುತ್ತದೆ” ಎಂದರು.

ಲಂಚಕ್ಕೆ ಅವಕಾಶವಿಲ್ಲ:

“ನಿವೇಶನ ಮತ್ತು ಮನೆಗಳಿಗಾಗಿ 300 ಎಕರೆ ಜಮೀನು ಗುರುತಿಸಲಾಯಿತು. ಸಚಿವ ಜಮೀರ್ ಅಹಮದ್ ಖಾನ್ ರವರು 5 ಸಾವಿರ ಮನೆಗಳನ್ನು ಮಂಜೂರು ಮಾಡಿದರು. ಇವುಗಳನ್ನು ಹಂಚುವ ಕೆಲಸ ಮಾಡುತ್ತೇವೆ. ನೀವು ಅಧಿಕಾರಿಗಳಿಗೆ ಲಂಚ ನೀಡಲು ನಾನು ಹಾಗೂ ಯೋಗೇಶ್ವರ್ ಬಿಡುವುದಿಲ್ಲ” ಎಂದು ಹೇಳಿದರು.

ನಾನು ಹೇಳಿದ್ದು ನಿಜವಾಯಿತು:

“ಮೂರು ಕ್ಷೇತ್ರಗಳ ಉಪಚುನಾವಣೆಗಳ ಪೈಕಿ ಸಂಡೂರು ಬಿಟ್ಟರೆ ಎಲ್ಲೂ ನೀವು ಎಲ್ಲೂ ಗೆಲ್ಲಲ್ಲ ಅಂತ ಮಾಧ್ಯಮಗಳು ಹೇಳಿದ್ದವು. ಎಲ್ಲಾ ಸಮೀಕ್ಷೆಗಳು ತಲೆ ಕೆಳಗಾಗುತ್ತವೆ. ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದೆ. ನಮ್ಮ ಸರ್ಕಾರದ ಸಂಖ್ಯಾಬಲ 135 ಅಲ್ಲ, 138 ಎಂದು ಹೇಳಿದ್ದೆ. ಮಾಜಿ ಸಿಎಂ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಅವರ ಸುಪುತ್ರ ವಿರುದ್ಧ ಗೆಲ್ಲುತ್ತೇವೆ ಎಂದು ಹೇಳಿದ್ದೆವು. ನೀವು ಅದೇ ರೀತಿ ಫಲಿತಾಂಶ ಕೊಟ್ಟಿದ್ದೀರಿ” ಎಂದರು.

ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಆಸೆ ಇತ್ತು:

“ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಇಚ್ಛೆ ಇತ್ತು. ಪಕ್ಷ ಅದಕ್ಕೆ ಒಪ್ಪಲಿಲ್ಲ. ಸುರೇಶ್ ಅವರು ಸ್ಪರ್ಧಿಸಲು ಒತ್ತಡ ಇತ್ತು. ನಾವು ಕುಟುಂಬಕ್ಕಿಂತ ಪಕ್ಷ ಮುಖ್ಯ ಎಂದು ತೀರ್ಮಾನ ಮಾಡಿದೆ. ಯೋಗೇಶ್ವರ್ ಅವರು ಪಕ್ಷ ಹಾಗೂ ನಾಯಕತ್ವ ಒಪ್ಪಿ ಬಂದ ನಂತರ, ನಮ್ಮ ಪಕ್ಷದ ಹಿರಿಯ ನಾಯಕರ ಜತೆ ಚರ್ಚೆ ಮಾಡಿ, ಅಂತಿಮ ತೀರ್ಮಾನ ಮಾಡಿದೆವು. ಈ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳಲು ಆಗಲಿಲ್ಲ. ಆದರೆ ಚಿಂತೆ ಮಾಡುವುದು ಬೇಡ, ನಾವು ಎಲ್ಲಾ ಕಾರ್ಯಕರ್ತರ ರಕ್ಷಣೆ ಮಾಡೇ ಮಾಡುತ್ತೇವೆ” ಎಂದು ಭರವಸೆ ನೀಡಿದರು.

ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತೇವೆ:

“ನಮಗೆ ಮಹಿಳೆಯರು ಹೆಚ್ಚು ಬೆಂಬಲ ನೀಡಿದ್ದಾರೆ, ಕಾರ್ಯಕರ್ತರು ಒಗ್ಗಟ್ಟಿನ ಕೆಲಸ ಮಾಡಿದ್ದಾರೆ. ನಾನು, ಸುರೇಶ್, ಪುಟ್ಟಣ್ಣ, ಬಾಲಕೃಷ್ಣ, ರವಿ, ಇಕ್ಬಾಲ್ ಹುಸೇನ್ ಎಲ್ಲರೂ ನಿಮ್ಮ ಜತೆ ಇರುತ್ತೇವೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ 25 ಸಾವಿರ ಮತಗಳ ಅಂತರದ ಗೆಲುವು ನೀಡಿದ್ದೀರಿ. ಮುಂದೆ ನಾನು ಹಾಗೂ ಯೋಗೇಶ್ವರ್ ಸತ್ತೆಗಾಲಕ್ಕೆ ಭೇಟಿ ನೀಡಿ ನೀರಾವರಿ ಯೋಜನೆ, ಕೆರೆ ತುಂಬಿಸುವ ಕೆಲಸ, ರಸ್ತೆ ಅಭಿವೃದ್ಧಿ ಸೇರಿ ಎಲ್ಲಾ ಯೋಜನೆ ಬಗ್ಗೆ ಗಮನ ಹರಿಸುತ್ತೇವೆ” ಎಂದರು.

“ದಳದ ಕಾರ್ಯಕರ್ತರು ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ. ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೊಸ ರೂಪ ಕೊಟ್ಟು, ಈ ಭಾಗದ ಜನರ ಆಸ್ತಿ ಮೌಲ್ಯ ಹೆಚ್ಚಿಸಲು ನಾವು ಕೆಲಸ ಮಾಡೋಣ. ಒಬ್ಬ ವ್ಯಕ್ತಿಗಾಗಿ ಪಕ್ಷವನ್ನೇ ಬಲಿಕೊಟ್ಟ ಬಗ್ಗೆ ಈಗ ಚರ್ಚೆ ಬೇಡ. ಯೋಗೇಶ್ವರ್ ಹಿರಿಯರು, ಅನುಭವ ಇರುವವರು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಾರೆ. ನಾನು, ಸಿದ್ದರಾಮಯ್ಯ ಅವರು ಹಾಗೂ ಇಡೀ ಸರ್ಕಾರ ನಿಮ್ಮ ಜತೆ ನಿಲ್ಲಲಿದೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here