ಬೆಂಗಳೂರು:
ರಾಜ್ಯ ಸರ್ಕಾರ ಜನರ ಮೇಲೆ ಹೆಚ್ಚಿನ ತೆರಿಗೆ ಹಾಕದೆ, ಹೆಚ್ಚಿನ ಸಾಲ ಮಾಡದೇ ಐದೂ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಬೇಕು. ಇದರ ಹೊರತಾಗಿ ತೆರಿಗೆ ಹಾಕಿದರೆ ಜನ ವಿರೋಧಿ ಗ್ಯಾರೆಂಟಿಗಳಾಗುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ಕುರಿತು ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯಪಾಲರ ಭಾಷಣ ನೋಡಿದಾಗ ಜನರ ನಿರೀಕ್ಷೆ ಈಡೇರಿಸುವ, ಭಿನ್ನ ಆಡಳಿತ ನೀಡುವ ಬರವಸೆ ಇಲ್ಲ. ಚರ್ವಿತ ಚರ್ವಣ ಭಾಷಣ ಇದಾಗಿದೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಗ್ಯಾರೆಂಟಿಗಳನ್ನು ಸಾಮಾನ್ಯ ಆಶ್ವಾಸನೆಗಳನ್ನೇ ವಿಶೇಷ ಎಂದು ಬಿಂಬಿಸಿದ್ದಾರೆ. ಗ್ಯಾರೆಂಟಿ ಗಳಿಗೆ ಜನರು ಮರುಳಾಗಿದ್ದಾರೊ ಗೊತ್ತಿಲ್ಲ. ಮನ್ನಣೆ ಕೊಟ್ಟಿದ್ದಾರೆ. ಜನರು ನೀವು ಕೊಟ್ಟ ಮಾತುಗಳನ್ನು ಹೆಚ್ಚು ನಂಬಿದ್ದಾರೆ. ಎಲ್ಲರಿಗೂ ಗೃಹ ಲಕ್ಷ್ಮಿ, ಎಲ್ಲರಿಗೂ 10 ಕೆಜಿ ಉಚಿತ ಅಕ್ಕಿ, ಎಲ್ಲರಿಗೂ ಗೃಹ ಜ್ಯೋತಿ, ಡಿಗ್ರಿಯಾದವರಿಗೆ ನಿರುದ್ಯೋಗ ಭತ್ಯೆ ಅಂತ ಹೇಳಿದ್ದೀರಿ. ಈಗ ಎಲ್ಲದಕ್ಕೂ ಕಂಡಿಷನ್ ಹಾಕಿ ಎಲ್ಲದಕ್ಕೂ ಏಜೆಂಟ್ ಗಳು ಹುಟ್ಟಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬಸ್ ಪ್ರಯಾಣ ಮಾತ್ರ ಆರಂಭವಾಗಿದೆ. ಅಕ್ಕಿ ಬದಲು ದುಡ್ಡು ಕೊಡುವುದಾಗಿ ಹೇಳಿದ್ದಾರೆ. ನೀವು ಕೊಡುವ ಹಣಕ್ಕೆ ಎರಡೂವರೆ ಕೆಜಿ ಅಕ್ಕಿ ಬರುತ್ತದೆ. ನೀವು ಘೋಷಣೆ ಮಾಡಿರುವಂತೆ ಎಲ್ಲ ಯೋಜನೆಗಳ ಜಾರಿಗೆ 52 ಸಾವಿರ ಕೋಟಿ ಖರ್ಚಾಗುತ್ತದೆ ಅಂತ ನೀವೆ ಹೇಳಿದ್ದೀರಿ. ಆದರೆ, ಎಲ್ಲದಕ್ಕೂ ಕಂಡಿಷನ್ ಹಾಕಿರೋದರಿಂದ ಸುಮಾರು 20 ರಿಂದ 25 ಸಾವಿರ ಕೊಟಿ ಮಾತ್ರ ಖರ್ಚಾಗಬಹುದು.
ರಾಜ್ಯದಲ್ಲಿ ಜಿಎಸ್ ಟಿ ಸಂಗ್ರಹ ಹೆಚ್ಚಾಗಿದೆ. ಇತರ ಟ್ಯಾಕ್ಸ್ ಸಂಗ್ರಹ ಕೂಡ ಹೆಚ್ಚಾಗಿದೆ. ಈ ಸರ್ಕಾರ ಹೆಚ್ಚಿನ ಸಾಲ ತೆಗೆದುಕೊಳ್ಳುವ ಅಗತ್ಯವಿಲ್ಲ. ನಾನು ಸರಪ್ಲಸ್ ಬಜೆಟ್ ಮಂಡನೆ ಮಾಡಿದ್ದೇನೆ. 78 ಸಾವಿರ ಕೋಟಿ ಸಾಲ ತೆಗೆದುಕೊಳ್ಳಲು ಅವಕಾಶ ಇದೆ ಅಷ್ಟು ಮಾತ್ರ ತೆಗೆದುಕೊಂಡರೆ ಸಾಕು. ಮೂಲ ಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಮೀಸಲಿಟ್ಟ ಹಣವನ್ನು ಬಳಕೆ ಮಾಡಬಹುದು. ಎಲ್ಲ ನೀರಾವರಿ ಯೋಜನೆ, ಶಿಕ್ಷಣ ಇಲಾಖೆ ಯೋಜನೆ, ಕೃಷಿ ಹಾಗೂ ಸೇವಾ ವಲಯಕ್ಕೆ ಆದ್ಯತೆ ನೀಡಬೇಕು. ಅದನ್ನು ಬಿಟ್ಟು ಜನರ ದುಡ್ಡನ್ನು ಕಸಿದುಕೊಂಡು ಇನ್ನೊಂದ ಕಡೆ ಕೊಟ್ಟ ಹಾಗೆ ಆಗುತ್ತದೆ ಎಂದು ಹೇಳಿದರು.