ಬೆಂಗಳೂರು:
ರಾಜ್ಯದಲ್ಲಿ ಎಟಿಎಂ ಸರಕಾರ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಗುತ್ತಿಗೆದಾರ ಅಂಬಿಕಾಪತಿ ಮನೆಗೆ ದಾಳಿ ಮಾಡಿದಾಗ ಸುಮಾರು 23 ಬಾಕ್ಸ್‍ಗಳಲ್ಲಿ 42 ಕೋಟಿ ಹಣ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಮಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ನಾವು ಇಲ್ಲಿ ಸರಕಾರ ಬಂದರೆ ಕಾಂಗ್ರೆಸ್ ಪಕ್ಷದ ಎಟಿಎಂ ಆಗಲಿದೆ ಎಂದಿದ್ದೆವು. ದೇಶದ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಇಲ್ಲಿನ ಸರಕಾರ ಬದಲಾಗಿದೆ. ಹಣ ಸಿಕ್ಕಿದ ಗುತ್ತಿಗೆದಾರರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಕಾಣಿಸಿಕೊಂಡಿದ್ದರು. ಇದು ಪರ್ಸಂಟೇಜ್ ಸರಕಾರ ಎಂಬುದಕ್ಕೆ ಸಾಕ್ಷಿ. ನೈತಿಕ ಹೊಣೆ ಹೊತ್ತು ಶಿವಕುಮಾರ್ ಮತ್ತು ಸಿದ್ರಾಮಣ್ಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಹೇಮಂತ್ ಮತ್ತು ಪ್ರಮೋದ್ ಮನೆಗೂ ದಾಳಿ ಆಗಿದೆ. ಕೆಲವು ದಿನಗಳ ಹಿಂದೆ ಗುತ್ತಿಗೆದಾರರ 600 ಕೋಟಿ ಹಣವನ್ನು ಈ ಸರಕಾರ ಬಿಡುಗಡೆ ಮಾಡಿತ್ತು. ಈ 42 ಕೋಟಿ ಹಣ ಕಮಿಷನ್ ರೂಪದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕಾದದ್ದು ಎಂಬುದು ಬಹಿರಂಗಗೊಂಡಿದೆ ಎಂದರು.
ಆ ಕಮಿಷನ್‍ನ ಸಂಗ್ರಹವಾದ ಹಣ ಅಂಬಿಕಾಪತಿಯವರ ಮನೆಯಲ್ಲಿ ಸಿಕ್ಕಿದೆ. ತೆಲಂಗಾಣದ ಚುನಾವಣೆಗೆ ಸಂಗ್ರಹಿಸಿದ ಹಣ ಎಂಬುದು ಸ್ಪಷ್ಟಗೊಂಡಿದೆ. ಕೆಲವು ದಿನಗಳ ಹಿಂದೆ ಗುತ್ತಿಗೆದಾರರು ರಾಜ್ಯಪಾಲರಿಗೇ ದೂರು ಕೊಟ್ಟಿದ್ದರು. ಪರ್ಸಂಟೇಜ್ ಸರಕಾರ ಇದೆ. ಕಮಿಷನ್‍ನಿಂದ ಬದುಕುತ್ತಿದ್ದಾರೆ ಎಂದು ತಿಳಿಸಿದ್ದರು. ಅದು ಸ್ಪಷ್ಟವಾಗಿದೆ ಎಂದು ವಿವರಿಸಿದರು.
ನಮ್ಮ ಸರಕಾರ ಇದ್ದಾಗ ಪರ್ಸಂಟೇಜ್ ಸರಕಾರ ಎಂದಿದ್ದರು. ಆದರೆ, ಯಾವುದೇ ಸಾಕ್ಷಿ, ಪುರಾವೆ ಇರಲಿಲ್ಲ. ಇವತ್ತು ಸಾಕ್ಷಿ, ಪುರಾವೆ ಲಭಿಸಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅನುದಾನಗಳು ಬಿಡುಗಡೆ ಆಗುತ್ತಿಲ್ಲ. ಅನುದಾನ ಬಿಡುಗಡೆಗೂ ಕಮಿಷನ್ ಕೊಡಬೇಕಾಗಿದೆ ಎಂದು ಆಕ್ಷೇಪಿಸಿದರು.
ಅಧಿಕಾರಿಗಳ ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ; ಈ ಕುರಿತು ಅಧಿಕಾರಿಗಳೇ ರಾಜ್ಯಪಾಲರಿಗೆ ಮನವಿ ಕೊಟ್ಟರೆ ಆ ಅಧಿಕಾರಿಗಳನ್ನು ಬಂಧಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಭ್ರಷ್ಟಾಚಾರಿಗಳಿಗೆ ಬೆಂಗಾವÀಲಾಗಿರುವ ಸರಕಾರ ಇದು ಎಂದು ದೂರಿದರು. ಇದು ಕಲೆಕ್ಷನ್ ಸರಕಾರ, ಎಟಿಎಂ ಸರಕಾರ ಎಂದು ಟೀಕಿಸಿದರು.
ಕರ್ನಾಟಕ ಕತ್ತಲ ರಾಜ್ಯವಾಗುತ್ತಿದೆ. ವಿದ್ಯುತ್ ಕೊರತೆ ಕಾಣುತ್ತಿದ್ದೇವೆ. ಒಂದೆಡೆ ಉಚಿತ ಎನ್ನುತ್ತಾರೆ. ಮಧ್ಯಮ ವರ್ಗದವರಿಗೆ ಬೆಲೆ ಏರಿಕೆಯ ಬರೆ ಬೀಳುತ್ತಿದೆ. ರೈತರಿಗೆ ಕರೆಂಟೇ ಇಲ್ಲ. ರಾತ್ರಿ ನಿದ್ರೆಗೆಟ್ಟು ಪಂಪ್ ಹಾಕುವ ಸ್ಥಿತಿ ಬಂದಿದೆ. ಈ ಸರಕಾರ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸಿಕ್ಕಿದ ಹಣವೆಲ್ಲವೂ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಸಂಬಂಧಿಸಿದೆ ಎಂದರು.