ಬೆಂಗಳೂರು:
ಇಂದಿರಾ ಕ್ಯಾಂಟೀನ್‌ನ ದೈನಂದಿನ ಚಟುವಟಿಕೆ, ನಿರ್ವಹಣೆಯನ್ನು ನೋಡಿಕೊಳ್ಳಲು ಪ್ರತ್ಯೇಕ ಅಧಿಕಾರಿಯ ಅಗತ್ಯವಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಚರ್ಚೆ ನಡೆಸಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿಯವರು ಶುಕ್ರವಾರ ಹೇಳಿದರು.
ಶುಕ್ರವಾರ ಬನಪ್ಪ ಪಾರ್ಕ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ರಾಮಲಿಂಗಾ ರೆಡ್ಡಿಯವರು ಮಾತನಾಡಿದರು.
ಇಂದಿರಾ ಕ್ಯಾಂಟೀನ್ ಸಾರ್ವಜನಿಕ ಕ್ಯಾಂಟೀನ್ ಗಳಾಗಿದ್ದು, ಇವುಗಳ ದೈನಂದಿನ ಚಟುವಟಿಕೆ ಹಾಗೂ ನಿರ್ವಹಣೆಗಳ ಮೇಲೆ ನಿಗಾ ಇಡಲು ಅಧಿಕಾರಿಗಳ ನೇಮಕದ ಅಗತ್ಯವಿದೆ. ಶೀಘ್ರದಲ್ಲೇ ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಕಾಂಗ್ರೆಸ್ ಪಕ್ಷವು ಜನರಿಗೆ ನೀಡಿರುವ ಭರವಸೆಗಳನ್ನು ಖಂಡಿತವಾಗಿಯೂ ಜಾರಿಗೆ ತರಲಿದೆ, ಬಿಜೆಪಿಯವರು ಇದರ ಬಗ್ಗೆ ಕೆಸರೆರಚಾಟ ನಡೆಸುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಗ್ಯಾರೆಂಟಿಗಳ ಬಗ್ಗೆ ಬಿಜೆಪಿ ನಾಯಕರು ಸುಳ್ಳು ಹೇಳಿಕೆ ನೀಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಆಸ್ಪತ್ರೆಗಳ ಬಳಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು ಕಾಂಗ್ರೆಸ್ ಸರಕಾರ. ಇದರಿಂದ ಲಕ್ಷಾಂತರ ಬಡವರು ದಿನನಿತ್ಯದ ಸರಿಯಾದ ಸಮಯಕ್ಕೆ ಊಟಕ್ಕೆ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉದ್ದೇಶಪೂರ್ವಕವಾಗಿ ಹಣ ನೀಡದ ಕಾರಣ ಕ್ಯಾಂಟೀನ್‌ಗಳನ್ನು ಮುಚ್ಚಲಾಯಿತು ಎಂದು ಆರೋಪಿಸಿದರು.
ಇದೀಗ ವಿವಿಧ ಪಟ್ಟಣಗಳಿಂದ ಬೆಂಗಳೂರಿಗೆ ಕೆಲಸ ಮಾಡಲು ಬರುವ ಜನರ ಅನುಕೂಲಕ್ಕಾಗಿ, ಬೆಂಗಳೂರಿನ ಜನರಿಗೆ, ವಿಶೇಷವಾಗಿ ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಕ್ಯಾಂಟೀನ್‌ಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿ, ದಯವಿಟ್ಟು ಕಾದು ನೋಡಿ. ಎಲ್ಲಾ ಸಮುದಾಯದ ಮುಖಂಡರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.