ಬೆಂಗಳೂರು:
ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಯೋಜನೆ ನಿಲ್ಲದ ಹಾಗೆ ನೋಡಿಕೊಂಡು ಹಸಿದವರ ಹಸಿವನ್ನು ನೀಗಿಸುವ ಕೆಲಸವನ್ನು ಮಾಡಬೇಕು ಹಾಗೂ ಮುಖ್ಯಮಂತ್ರಿಗಳೇ ಖುದ್ದಾಗಿ ಆಸಕ್ತಿ ವಹಿಸಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹಸಿದವರ ಹೊಟ್ಟೆ ತುಂಬಿಸಲು ಸರ್ಕಾರ ಇಷ್ಟನ್ನೂ ಮಾಡಲು ಮೀನಾಮೇಷ ಎಣಿಸುವುದನ್ನು ನೋಡಿದರೆ ಬಡವರ ಪರ ಯಡಿಯೂರಪ್ಪರ ಕಾಳಜಿಯ ಕುರಿತು ಸಂದೇಹಗಳು ಹುಟ್ಟುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ದುಡಿಯುವ ಕಾರ್ಮಿಕರು , ಬಡವರು ಮುಂತಾದವರ ಹಸಿವನ್ನು ನೀಗಿಸಲು ಬಿ.ಬಿ.ಎಂ.ಪಿ. ಮತ್ತು ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸಲಾಗಿತ್ತು . ಈ ಕ್ಯಾಂಟೀನ್ ಗಳು ಸುಸೂತ್ರವಾಗಿ ರಾಜ್ಯದ ಉದ್ದಗಲಕ್ಕೂ ಹಸಿದವರ ಹೊಟ್ಟೆ ತುಂಬಿಸುವ ಕೆಲಸವನ್ನು ಮಾಡುತ್ತಿದ್ದವು. ಆದರೆ ಬಿ.ಜೆ.ಪಿ. ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ ನಿರಂತರವಾಗಿ ಇಂದಿರಾ ಕ್ಯಾಂಟೀನ್ ಗಳನ್ನು ವ್ಯವಸ್ಥಿತವಾಗಿ ಮುಚ್ಚಲು ಪ್ರಯತ್ನ ಮಾಡುತ್ತಿರುವಂತೆ ಕಾಣಿಸುತ್ತಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದಿರಾ ಕ್ಯಾಂಟಿನ್ ಗಳಿಗೆ ಬಿಡುಗಡೆ ಮಾಡಬೇಕಾದ ಹಣವನ್ನು ನಿಗದಿತವಾಗಿ ಬಿಡುಗಡೆ ಮಾಡದೇ ಸತಾಯಿಸಲಾಗುತ್ತಿದೆ. ಬೆಂಗಳೂರಿನ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಇರುವ ಕ್ಯಾಂಟೀನ್ ಗಳಿಗೆ ಸುಮಾರು 28 ಕೋಟಿಗಳನ್ನು ಬಿಡುಗಡೆ ಮಾಡದೇ ಸುಮಾರು 6 ತಿಂಗಳಿನಿಂದ ಬಾಕಿ ಉಳಿಸಿಕೊಳ್ಳಲಾಗಿದೆ. 198 ಕ್ಯಾಂಟೀನ್ ಗಳಿಗೆ ನೀರಿನ ಸಂಪರ್ಕ ಮತ್ತು ಸ್ಯಾನಿಟರಿ ಲೈನನ್ನು ಕೂಡ ಬಿ.ಡಬ್ಲೂ.ಎಸ್.ಎಸ್.ಬಿ ಕಡಿತಗೊಳಿಸಿದೆ. ಅಲ್ಲದೇ 12 ಅಡಿಗೆ ಮನೆಗಳಿಗೂ ನೀರಿನ ಸಂಪರ್ಕವನ್ನು ನಿಲ್ಲಿಸಲಾಗಿದೆ. ಇಂದಿರಾ ಕ್ಯಾಂಟೀನ್ ನ ಹೆಸರನ್ನು ಬದಲಾಯಿಸಿ ರಾಜಕಾರಣ ಮಾಡಲು ಸಹ ಈ ಹಿಂದೆ ಪ್ರಯತ್ನಿಸಲಾಗಿತ್ತು. ಈ ರೀತಿಯ ಹಲವು ಹುನ್ನಾರಗಳನ್ನು ಮಾಡಿ ಕ್ಯಾಂಟೀನ್‌ಗಳನ್ನು ಮುಚ್ಚಲು ಪ್ರಯತ್ನ ಮಾಡುತ್ತಿರುವಂತೆ ಕಂಡು ಬರುತ್ತಿದ್ದು ಇವೆಲ್ಲ ಬಿಜೆಪಿ ಸರ್ಕಾರ ಹಸಿದವರ, ಬಡವರ, ದೀನರ ಪರವಾಗಿ ಇಲ್ಲ ಎನ್ನುವುದಕ್ಕೆ ಉದಾಹರಣೆಗಳಾಗಿವೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಸರ್ಕಾರ ಹಲವು ರೀತಿಯ ದುಂದು ವೆಚ್ಚದ, ಅಗತ್ಯವಿಲ್ಲದ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರು ದುಡಿಮೆ ಇಲ್ಲದೇ ಪರಿತಪ್ಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಆಹಾರವನ್ನು ನೀಡಬೇಕೆಂದು ಈ ಹಿಂದೆ ಪತ್ರ ಬರೆದು ಒತ್ತಾಯಿಸಿದ್ದೆವು. ಇದಕ್ಕೆ ಹೆಚ್ಚೆಂದರೆ ವರ್ಷಕ್ಕೆ ರೂ .200 ರಿಂದ 250 ಕೋಟಿ ಖರ್ಚು ಬರಬಹುದೆಂದು ಸಿದ್ದರಾಮಯ್ಯ ಹೇಳಿದ್ದಾರೆ.