ಬೆಂಗಳೂರು, ಮಾರ್ಚ್ 12: ವಿದ್ಯುತ್ ಉಳಿತಾಯ ಮತ್ತು ಉತ್ತಮ ರಸ್ತೆ ಬೆಳಕಿನ ಉದ್ದೇಶದಿಂದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಇಡಿ ಬೀದಿ ದೀಪ ಅಳವಡಿಕೆ ಯೋಜನೆ ವೇಗವಾಗಿ ನಡೆಯುತ್ತಿದೆ.
ಪಾಲಿಕೆಯ ಮಾಹಿತಿ ಪ್ರಕಾರ ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವಾರ್ಡ್ಗಳಲ್ಲಿ ಎನರ್ಜಿ ದಕ್ಷ ಎಲ್ಇಡಿ ಬೀದಿ ದೀಪ ಅಳವಡಿಕೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಅದೇ ವೇಳೆ ಬೆಂಗಳೂರು ದಕ್ಷಿಣ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವಾರ್ಡ್ಗಳಲ್ಲಿ ಎಲ್ಇಡಿ ದೀಪ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ.
ಪ್ರಸ್ತುತ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 56,857 ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ.
ಒಟ್ಟಾರೆ ಪಾಲಿಕೆ ವ್ಯಾಪ್ತಿಯಲ್ಲಿ 1,34,187 ಬೀದಿ ದೀಪಗಳಿದ್ದು, ಅದರಲ್ಲಿ 68,374 ದೀಪಗಳನ್ನು ಎಲ್ಇಡಿ ದೀಪಗಳಾಗಿ ಪರಿವರ್ತಿಸುವ ಯೋಜನೆ ರೂಪಿಸಲಾಗಿದೆ.
ಎಲ್ಇಡಿ ಬೀದಿ ದೀಪ ಅಳವಡಿಕೆ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಜಾರಿಗೆ ತರಲಾಗಿದೆ.
ಈ ಯೋಜನೆಯಡಿ
- ಖಾಲಿ ಕಂಬಗಳಲ್ಲಿ ಹೊಸ ಎಲ್ಇಡಿ ದೀಪ ಅಳವಡಿಕೆ
- ಚಾಲ್ತಿಯಲ್ಲಿರುವ ಸೋಡಿಯಂ ದೀಪಗಳನ್ನು ಎಲ್ಇಡಿಗೆ ಬದಲಾವಣೆ
- ಉದ್ಯಾನವನಗಳಲ್ಲಿ ಬೆಳಕು ವ್ಯವಸ್ಥೆ
- ಪ್ರಮುಖ ಜಂಕ್ಷನ್ಗಳಲ್ಲಿ ಹೈಮಾಸ್ಟ್ ಎಲ್ಇಡಿ ದೀಪ ಅಳವಡಿಕೆ, ಮಾಡಲಾಗುತ್ತಿದೆ.
ವಿದ್ಯುತ್ ವೆಚ್ಚ ಕಡಿತ, ರಸ್ತೆ ಬೆಳಕು ಹೆಚ್ಚಳ
ಈ ಯೋಜನೆಯ ಮೂಲಕ ಬೀದಿ ದೀಪಗಳಿಗೆ ಬೇಕಾಗುವ ವಿದ್ಯುತ್ ಬಳಕೆ ಮತ್ತು ವೆಚ್ಚ ಕಡಿಮೆಯಾಗುವ ಜೊತೆಗೆ ರಸ್ತೆಗಳಲ್ಲಿ ಉತ್ತಮ ಬೆಳಕು ಒದಗಿಸಲು ಸಹಕಾರಿಯಾಗಲಿದೆ.
ಪಾಲಿಕೆ ಅಧಿಕಾರಿಗಳ ಪ್ರಕಾರ, ಎಲ್ಇಡಿ ದೀಪಗಳ ಬಳಕೆ ಮೂಲಕ ವಿದ್ಯುತ್ ಉಳಿತಾಯದೊಂದಿಗೆ ಸಾರ್ವಜನಿಕ ಸುರಕ್ಷತೆಯೂ ಹೆಚ್ಚಾಗಲಿದೆ.
