ಬೆಂಗಳೂರು, ಮಾರ್ಚ್ 11: ನಗರದಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಕಡಿಸಲು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಅವರು ಅಧಿಕಾರಿಗಳಿಗೆ ತಮ್ಮ ತಮ್ಮ ವಿಭಾಗಗಳಲ್ಲಿ ರಸ್ತೆ ಅಗಲೀಕರಣ ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ಬರುತ್ತಿರುವ CMIDP ಮತ್ತು CSSIP ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ವೇಳೆ ಅವರು ಈ ನಿರ್ದೇಶನ ನೀಡಿದರು. ಈ ಯೋಜನೆಗಳಿಗೆ ಈಗಾಗಲೇ ಟೆಂಡರ್ ಮಂಜೂರಾಗಿರುವುದರಿಂದ ಯಾವುದೇ ವಿಳಂಬವಿಲ್ಲದೆ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.
ಕಾಮಗಾರಿಗಳ ಗುಣಮಟ್ಟವನ್ನು ಖಚಿತಪಡಿಸಲು ವಿಭಾಗೀಯ ಕಾರ್ಯಪಾಲಕ ಅಭಿಯಂತರರು ಸ್ಥಳದಲ್ಲೇ ಹಾಜರಿದ್ದು ಕೆಲಸಗಳ ಮೇಲ್ವಿಚಾರಣೆ ಮಾಡಬೇಕು ಎಂದು ಆಯುಕ್ತರು ಸೂಚಿಸಿದರು. ಜೊತೆಗೆ ನಗರ ಪಾಲಿಕೆಯ “ನಮ್ಮ ರಸ್ತೆ ಕೈಪಿಡಿ”ಯಲ್ಲಿ ಉಲ್ಲೇಖಿಸಿರುವ ಎಲ್ಲಾ ನಿಯಮಗಳು ಮತ್ತು ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ರಸ್ತೆ ಸುರಕ್ಷತೆಗೆ ಕ್ರಮ
ರಸ್ತೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸ್ಪೀಡ್ ಹಂಪ್ಸ್ಗಳನ್ನು ಅಗತ್ಯವಿರುವ ಸ್ಥಳಗಳಲ್ಲಿ ಮಾತ್ರ ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಬೇಕು ಹಾಗೂ ಸರಿಯಾದ ಗುರುತು ಚಿಹ್ನೆಗಳನ್ನು ಹಾಕಬೇಕು ಎಂದು ಸೂಚಿಸಿದರು. ಈಗಿರುವ ಅವೈಜ್ಞಾನಿಕ ಸ್ಪೀಡ್ ಹಂಪ್ಸ್ಗಳನ್ನು ತೆರವುಗೊಳಿಸಿ, ಅಗತ್ಯವಿರುವ ಸ್ಥಳಗಳಲ್ಲಿ ಮಾತ್ರ ಹೊಸ ಹಂಪ್ಸ್ಗಳನ್ನು ನಿರ್ಮಿಸಬೇಕು ಎಂದು ಹೇಳಿದರು.
ಪಾದಚಾರಿಗಳ ಸುರಕ್ಷತೆ
ಭಾರಿ ಸಂಚಾರ ಇರುವ ಪ್ರದೇಶಗಳಲ್ಲಿ ಪಾದಚಾರಿಗಳ ಸುರಕ್ಷತೆಗೆ ಜೆಬ್ರಾ ಕ್ರಾಸಿಂಗ್ಗಳನ್ನು ನಿರ್ಮಿಸಲು TEC ವಿಭಾಗಕ್ಕೆ ಸೂಚನೆ ನೀಡಲಾಗಿದೆ.
ಸಾರ್ವಜನಿಕ ಸೌಲಭ್ಯಗಳ ನಿರ್ವಹಣೆ
ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ಕೈವಾಕ್ ಮತ್ತು ಬಸ್ ಶೆಲ್ಟರ್ಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು ಹಾಗೂ ಅವುಗಳನ್ನು ಸ್ವಚ್ಛವಾಗಿ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮುಖ್ಯ ಅಭಿಯಂತರರು, ಎಲ್ಲಾ ವಿಭಾಗಗಳ ಕಾರ್ಯಪಾಲಕ ಅಭಿಯಂತರರು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
