ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಸೂಕ್ತ ಜಾಗಗಳನ್ನು ಗುರುತಿಸುವಂತೆ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಸವನಗುಡಿ ಕ್ಷೇತ್ರದ ಶಾಸಕರಾದ ಎಲ್.ಎ. ರವಿ ಸುಬ್ರಹ್ಮಣ್ಯ ಅವರ ಸಮ್ಮುಖದಲ್ಲಿ ನಡೆದ ವಿಧಾನಸಭಾ ವ್ಯಾಪ್ತಿಯ ವಾರ್ಡ್ಗಳ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಆಯುಕ್ತರು, ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆಯಿಂದ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಾಗುವುದರ ಜೊತೆಗೆ, ನಗರ ಪಾಲಿಕೆಗೆ ಹೆಚ್ಚುವರಿ ಆದಾಯದ ಮೂಲ ರೂಪುಗೊಳ್ಳಲಿದೆ ಎಂದು ಹೇಳಿದರು.
ಅಕ್ರಮ ಫ್ಲೆಕ್ಸ್ ಮತ್ತು ಬ್ಯಾನರ್ಗಳಿಗೆ ಬ್ರೇಕ್
ನಗರ ವ್ಯಾಪ್ತಿಯಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ಗಳನ್ನು ತಕ್ಷಣ ತೆರವುಗೊಳಿಸಲು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಜಾಹೀರಾತುಗಳನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂಲಸೌಕರ್ಯ ಮತ್ತು ರಸ್ತೆ ಸುರಕ್ಷತೆ
ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವುದು, ನಾಗರಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವುದಕ್ಕೆ ಆದ್ಯತೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಇ-ಖಾತಾ ಪ್ರಕ್ರಿಯೆ ಸರಳೀಕರಣ
ನಾಗರಿಕರಿಗೆ ಇ-ಖಾತಾ ವಿತರಣೆಯಲ್ಲಿ ವಿಳಂಬವಾಗದಂತೆ, ಪ್ರಕ್ರಿಯೆಯನ್ನು ಸರಳಗೊಳಿಸಿ ತ್ವರಿತವಾಗಿ ಇ-ಖಾತಾ ನೀಡುವಂತೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಖಾಲಿ ಜಾಗಗಳಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ
ನಗರದ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಖಾಲಿ ಜಾಗಗಳಲ್ಲಿ ಕಸ ಎಸೆಯುವವರನ್ನು ಗುರುತಿಸಿ ದಂಡ ವಸೂಲಿ ಮಾಡುವಂತೆ ಹಾಗೂ ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು
- ನಿಯಮಾನುಸಾರ ಟ್ರೇಡ್ ಲೈಸನ್ಸ್ ನೀಡುವಿಕೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸೂಚನೆ
- ಎಲ್ಲಾ ವಾರ್ಡ್ಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಬಲಪಡಿಸಲು ನಿರ್ದೇಶನ
- ಉದ್ಯಾನವನಗಳಲ್ಲಿರುವ ಪರಿಕರಗಳ ದುರಸ್ತಿ ಹಾಗೂ ಒಣಗಿರುವ ಗಿಡಗಳ ಗುರುತಿಸಿ ಕ್ರಮ
- ರಸ್ತೆ ಬದಿಯಲ್ಲಿರುವ ಅಪಾಯಕರ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸುವುದು
- ಮಳೆಗಾಲದ ಮುನ್ನ ರಾಜಕಾಲುವೆ ಸ್ವಚ್ಛತಾ ಕಾರ್ಯಗಳನ್ನು ತ್ವರಿತಗೊಳಿಸಲು ಸೂಚನೆ
- ರಸ್ತೆಗಳಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಮತ್ತು ಸಮರ್ಪಕ ನಿರ್ವಹಣೆ
ಸಭೆಯಲ್ಲಿ ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ) ದಿಗ್ವಿಜಯ್ ಬೋಡ್ಕೆ, ಹೆಚ್ಚುವರಿ ಆಯುಕ್ತರು (ಕಂದಾಯ ಹಾಗೂ ಆಡಳಿತ) ಮಂಜುನಾಥ್ ಸ್ವಾಮಿ, ಜಂಟಿ ಆಯುಕ್ತ ಸಂಗಪ್ಪ ಹಾಗೂ ಸಂಬಂಧಿಸಿದ ಇಲಾಖೆ ಮುಖ್ಯಸ್ಥರು ಉಪಸ್ಥಿತರಿದ್ದರು.
