ಬೆಂಗಳೂರು, ಫೆ. 3: ಔಟರ್ ರಿಂಗ್ ರೋಡ್ನ ಇಬ್ಳೂರು ಜಂಕ್ಷನ್ ಬಳಿ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಹೆಚ್ಚುವರಿ ಫ್ಲೈಓವರ್ ನಿರ್ಮಾಣಕ್ಕೆ ಬ್ಲೂಪ್ರಿಂಟ್ ಸಿದ್ಧಪಡಿಸಲು ಮುಖ್ಯ ಆಯುಕ್ತರಾದ ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇಂದು GBA, B-SMILE, BMRCL, ಪೂರ್ವ ಹಾಗೂ ದಕ್ಷಿಣ ನಗರ ನಿಗಮದ ಅಧಿಕಾರಿಗಳೊಂದಿಗೆ ನಡೆದ ಸಂಯುಕ್ತ ಸ್ಥಳ ಪರಿಶೀಲನೆಯ ವೇಳೆ ಮಾತನಾಡಿದ ಅವರು, ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರಂವರೆಗಿನ ಔಟರ್ ರಿಂಗ್ ರೋಡ್ ಅನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಇಬ್ಳೂರು ಜಂಕ್ಷನ್ನಲ್ಲಿ ಸುಮಾರು 800 ಮೀಟರ್ ಉದ್ದದ ಫ್ಲೈಓವರ್ ಅಗತ್ಯವಿದ್ದು, ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ, ಅಂದಾಜು ವೆಚ್ಚ, ನಿರ್ಮಾಣ ಮಾದರಿ ಹಾಗೂ ಕಾಮಗಾರಿ ಪೂರ್ಣಗೊಳ್ಳುವ ಅವಧಿಯನ್ನು ಒಳಗೊಂಡ ಸಮಗ್ರ ಯೋಜನೆಯನ್ನು ಆಧುನಿಕ ತಂತ್ರಜ್ಞಾನ ಬಳಸಿ ತ್ವರಿತವಾಗಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ ಸಮಗ್ರ ಅಭಿವೃದ್ಧಿ
BMRCL ಮತ್ತು ದಕ್ಷಿಣ ನಗರ ನಿಗಮದ ಸಹಕಾರದಲ್ಲಿ, ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ HRPC ಸ್ಥಾಪನೆ, ಜಲಾವೃತ ತಡೆ ಕ್ರಮಗಳು ಹಾಗೂ ಸಂಬಂಧಿತ ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಲು ಸೂಚಿಸಲಾಗಿದೆ. ಮೆಟ್ರೋ ಪೈಲ್ ಕ್ಯಾಪ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ, ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಶೀಘ್ರವಾಗಿ ಕೆಲಸ ಮುಗಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಇಬ್ಲೂರು, ವಿಪ್ರೋ ಜಂಕ್ಷನ್, ಸಿಲ್ಕ್ ಬೋರ್ಡ್: ಬೆಂಗಳೂರು ದಕ್ಷಿಣದಲ್ಲಿ ಬಹು-ಇಲಾಖಾ ಅಭಿವೃದ್ಧಿ ಕಾರ್ಯತಂತ್ರ
ORR ಅಭಿವೃದ್ಧಿಗೆ DPR ಅಂತಿಮಗೊಳಿಸಲು ಸೂಚನೆ
ಔಟರ್ ರಿಂಗ್ ರೋಡ್, ಸರ್ವಿಸ್ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಯ ಮೂಲಕ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ವಿಸ್ತೃತ ಯೋಜನಾ ವರದಿ (DPR) ಸಿದ್ಧಗೊಳ್ಳುತ್ತಿದೆ. ಈಗಾಗಲೇ ನಡೆಯುತ್ತಿರುವ ಮೆಟ್ರೋ ಸಂಬಂಧಿತ ಕಾಮಗಾರಿಗಳ ಪುನರಾವರ್ತನೆ ಆಗದಂತೆ BMRCL ಹಾಗೂ B-SMILE ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ಮೆಟ್ರೋ ನಿಲ್ದಾಣಗಳ ಬಳಿ ರಸ್ತೆ ಸಮತಟ್ಟುಗೊಳಿಸಲು ಸೂಚನೆ
ORRನಲ್ಲಿ ಹಲವು ಮೆಟ್ರೋ ನಿಲ್ದಾಣಗಳ ಕೆಳಭಾಗದಲ್ಲಿ ರಸ್ತೆ ಅಸಮತಟ್ಟಾಗಿದ್ದು, ಪೈಲ್ ಕ್ಯಾಪ್ ಕಾಮಗಾರಿಯಿಂದ ರಸ್ತೆ ಅಗಲ ಕುಗ್ಗುತ್ತಿದೆ ಎಂದು ಗಮನಿಸಿದ ಮಹೇಶ್ವರ ರಾವ್, ಎಲ್ಲಾ ಮೆಟ್ರೋ ನಿಲ್ದಾಣಗಳನ್ನು ಪರಿಶೀಲಿಸಿ ತಕ್ಷಣ ಸಮಸ್ಯೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಇಬ್ಳೂರು ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ಕಡೆಗಿನ ಸುಮಾರು 2 ಕಿಮೀ ಪಾದಚಾರಿ ಮಾರ್ಗದಲ್ಲಿ ಕಾಮಗಾರಿ ಅಪೂರ್ಣವಾಗಿರುವುದನ್ನು ಗಮನಿಸಿ, ಅದನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಪಾದಚಾರಿ ಸ್ಕೈವಾಕ್ಗಳ ಪಟ್ಟಿ ಸಲ್ಲಿಸಲು ಸೂಚನೆ
ನಗರ ನಿಗಮ ಮತ್ತು ಸಂಚಾರ ಪೊಲೀಸ್ ಅಧಿಕಾರಿಗಳು ಸಂಯುಕ್ತವಾಗಿ ORR ಪರಿಶೀಲಿಸಿ, ಅಗತ್ಯವಿರುವ ಪಾದಚಾರಿ ಸ್ಕೈವಾಕ್ಗಳ ಪಟ್ಟಿ, ವಿನ್ಯಾಸ ಹಾಗೂ ಅಂದಾಜು ವೆಚ್ಚದ ವಿವರಗಳೊಂದಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಹೂಡಿ ಫ್ಲೈಓವರ್ ಮತ್ತು ITPL ರಸ್ತೆ ವಿಸ್ತರಣೆ
ಹೂಡಿ ವೃತ್ತದ ಬಳಿ ಪ್ರಸ್ತಾವಿತ ಫ್ಲೈಓವರ್ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ವೇಗಗೊಳಿಸಿ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ.
ITPL ಮುಖ್ಯ ರಸ್ತೆಯಲ್ಲಿನ ರಿಲಿಂಕ್ವಿಶ್ಮೆಂಟ್ ಡೀಡ್ ನೀಡಿರುವ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡು ರಸ್ತೆ ವಿಸ್ತರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇತರೆ ಪ್ರಮುಖ ನಿರ್ದೇಶನಗಳು
- ಫೆಬ್ರವರಿ ಅಂತ್ಯದೊಳಗೆ ಡಬಲ್ ಡೆಕ್ಕರ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದು
- HSR ಜಂಕ್ಷನ್ ಬಳಿ ಸರ್ವಿಸ್ ರಸ್ತೆ ಆಸ್ಫಾಲ್ಟಿಂಗ್
- ಕೊಡಿಬಿಸನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸರ್ವಿಸ್ ರಸ್ತೆ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿ
- ಕಾರ್ತಿಕ್ ನಗರ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಮಾರ್ಗ ಸ್ವಚ್ಛತೆ
- ನ್ಯೂ ಹರೈಜನ್ ಮೆಟ್ರೋ ನಿಲ್ದಾಣದ ಬಳಿ ಪೇ-ಅಂಡ್-ಪಾರ್ಕ್ ವ್ಯವಸ್ಥೆ ಜಾರಿ
- ಬಸವನಪುರ ಪಾರ್ಕ್ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು
ಪರಿಶೀಲನಾ ಸಂದರ್ಭದಲ್ಲಿ ನಗರ ನಿಗಮ ಆಯುಕ್ತರಾದ ರಮೇಶ್ ಕೆ.ಎನ್., ರಮೇಶ್ ಡಿ.ಎಸ್., BMRCL ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್, ಹೆಚ್ಚುವರಿ ಅಭಿವೃದ್ಧಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್, ಡಿಸಿಪಿ ಗೋಪಾಲ್ ಎಂ. ಬ್ಯಾಕೋಡ್, ಇಂಜಿನಿಯರ್-ಇನ್-ಚೀಫ್ ಡಾ. ಬಿ.ಎಸ್. ಪ್ರಹ್ಲಾದ್, ಮುಖ್ಯ ಇಂಜಿನಿಯರ್ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
