ಬೆಂಗಳೂರು:
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ (ಆರ್ ಜಿಯುಹೆಚ್ಎಸ್) ಅಧೀನದಲ್ಲಿರುವ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಾಂಗ ನಿರತ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಉತ್ತೇಜನ ನೀಡುವ ಸಲುವಾಗಿ ವಿವಿ ಸ್ವಾಧಿನದಲ್ಲಿರುವ ಕೆಂಗೇರಿ ಸಮೀಪದ ಭೀಮನಕೊಪ್ಪ ಗ್ರಾಮದ 50 ಎಕರೆ ಜಮೀನಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ||ಎಸ್.ಸಚ್ಚಿದಾನಂದ ತಿಳಿಸಿದರು.
ವಿವಿಯ ಅಧೀನದಲ್ಲಿರುವ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕರುಗಳಿಗೆ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆಂಗೇರಿ ಸಮೀಪದ ಭೀಮನಕೊಪ್ಪ ಗ್ರಾಮದ 50 ಎಕರೆ ಭೂಮಿಯಲ್ಲಿ ಮೊದಲನೆ ಹಂತದಲ್ಲಿ ತರಬೇತಿ ಮತ್ತು ಸಂಶೋಧನಾ ಕೇಂದ್ರಗಳನ್ನು ನಿರ್ಮಿಸಲಾಗುವುದು. ಎರಡನೇ ಅಂತದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಪ್ರಕಟಿಸಿದರು. ಈ ಸಂಬಂಧ ಸಮಗ್ರ ನೀಲಿನಕ್ಷೆಯನ್ನು ಸಿದ್ಧಗೊಳಿಸಲು ಉದ್ದೇಶಿಸಲಾಗಿದ್ದು, ರಾಜ್ಯ ಸರ್ಕಾರ ಹಾಗೂ ವಿವಿ ಸಿಂಡಿಕೇಟ್ ಸದಸ್ಯರ ಅನುಮೋದನೆ ಪಡೆದ ಬಳಿಕ ಈ ಯೋಜನೆಯನ್ನು ಕಾರ್ಯಗೊಳಿಸಲಾಗುವುದು ಎಂದು ಉಪಕುಲಪತಿ ಮಾಹಿತಿ ನೀಡಿದರು.
ವಿವಿಯ ಅಧೀನದಲ್ಲಿರುವ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡೆ ಹಾಗೂ ದೈಹಿಕ ಕ್ಷಮತೆಗೆ ಒತ್ತು ನೀಡಲು ರಾಜ್ಯದ 4 ಪ್ರಾದೇಶಿಕ ಕೇಂದ್ರಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಮಂಗಳೂರಿನಲ್ಲಿ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಳಿಸಲಾಗಿದೆ. ಒಂದೆರಡು ವರ್ಷಗಳಲ್ಲಿ ಈ ತರಬೇತಿ ಕೇಂದ್ರದ ನಿರ್ಮಾಣಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಕ್ರೀಡಾ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೈಹಿಕ ಕ್ಷಮತೆ, ಮಾನಸಿಕ ಆರೋಗ್ಯ ಕಾಳಜಿ ಪೌಸ್ಟಿಕ ಆಹಾರದ ಕುರಿತು ಮಾಹಿತಿ ಹಾಗೂ ತರಬೇತಿ ನೀಡುವ ಸಂಬಂಧ ರಾಜ್ಯ ಸರ್ಕಾರದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಜೊತೆ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿದೆ ಎಂದು ಉಪಕುಲಪತಿ ಈ ಸಂಧರ್ಭದಲ್ಲಿ ತಿಳಿಸಿದರು.
ವಿಶ್ವವಿದ್ಯಾಲಯ ಯೋಗ, ಕ್ರೀಡೆ ಹಾಗೂ ಇನ್ನಿತರ ಕ್ರೀಡಾ ಸಂಬಂಧಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದು, ನಾಲ್ಕು ಬಾರಿ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ಕ್ರೀಡಾಕೂಟವನ್ನು ಆಯೋಜಿಸಿತ್ತು. ಕ್ರೀಡಾ ಚಟುವಟಿಕೆಗೆ ಸಂಬಂಧಿಸಿದ ಕೈಂಕರ್ಯವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದ ಅವರು ಏಪ್ರಿಲ್ 07 ವಿಶ್ವ ಆರೋಗ್ಯ ದಿನವಾಗಿದ್ದು, ಈ ಸಂಬಂಧ ವಿಶ್ವವಿದ್ಯಾಲಯ ತನ್ನ ಅಧೀನದಲ್ಲಿರುವ ಎಲ್ಲಾ ಆರೋಗ್ಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳಗೆ ನಡಿಗೆ, ಓಟ ಹಾಗೂ ಸೈಕ್ಲಿಂಗ್ ಆಯೋಜಿಸಲು ಸೂಚಿಸಿದೆ ಎಂದು ಮಾಹಿತಿ ನೀಡಿದರು.
ಸ್ಪೋರ್ಟ್ಸ್ ಮೆಡಿಸಿನ್:
ವಿಶ್ವವಿದ್ಯಾಲಯವು ಈಗಾಗಲೇ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಸ್ಪೋರ್ಟ್ಸ್ ಮೆಡಿಸಿನ್ ವಿಭಾಗವನ್ನು ಪ್ರಾರಂಭಿಸಿದೆ. ಇದನ್ನು ಮುಂದಿನ ದಿನಗಳಲ್ಲಿ ಇತರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವಿಸ್ತರಿಸಲಾಗುವುದು ಎಂದ ಅವರು ಫಿಸಿಯೋಥೆರಪಿ ಸ್ನಾತಕೋತ್ತರ ಪದವಿಯಲ್ಲಿ ಸ್ಪೋರ್ಟ್ಸ್ ಮೆಡಿಸಿನ್ ವಿಭಾಗವನ್ನು ಕೂಡ ತೆರೆಯಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಮಂಗಳೂರು ವಿಶ್ವವಿದ್ಯಾಲದ ದೈಹಿಕ ಶಿಕ್ಷಣ ನಿರ್ದೇಶಕ ಡಾ||ಸಿ. ಕೆ. ಕಿಶೋರ್ ಕುಮಾರ್ ಮಾತನಾಡಿ ಕ್ರೀಡೆಗಳಲ್ಲಿ “ ಸಮೂಹ ಪಾಲ್ಗೊಳ್ಳುವಿಕೆಗೆ ” ಹೆಚ್ಚಿನ ಒತ್ತು ನೀಡಿ ಈ ಸಂಬಂಧ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು ಎಂದರು.
ನಮ್ಮಲ್ಲಿ ಕ್ರೀಡಾ ಉತ್ತೇಜನಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಗುಣಮಟ್ಟದ ಕ್ರೀಡಾಂಗಣಗಳ ಕೊರತೆ ಇದೆ. ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಸಮರ್ಪಕ ವ್ಯವಸ್ಥೆಗಳ ಕೊರತೆ ಇದೆ. ಹೀಗಾಗಿ ನಮಗೆ ಚೀನಾ ಮತ್ತು ಯೂರೋಪ್ ರಾಷ್ಟ್ರಗಳೊಂದಿಗೆ ಸ್ಪರ್ಧೆಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಿಶೋರ್ ಕುಮಾರ್ ಅಭಿಪ್ರಾಯಪಟ್ಟರು.
ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನುರಿತ ಸಂಪನ್ಮೂಲ ವ್ಯಕ್ತಿಗಳು ಎರಡು ದಿನಗಳ ಕಾಲ ತಾಂತ್ರಿಕ ಕಾರ್ಯಗಾರ ನಡೆಸಿಕೊಡಲಿದ್ದಾರೆ. ಸ್ಪೋಟ್ಸ್ ಮೆಡಿಸಿನ್ ನಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಧಾರವಾಡದ ಡಾ|| ಕಿರಣ್ ಕುಲಕರ್ಣಿ ಅವರು ಕೋವಿಡ್ ಕಾಲಘಟ್ಟದಲ್ಲಿ ಸ್ಪೋರ್ಟ್ಸ್ ಮೆಡಿಸಿನ್ ಕುರಿತು ವಿಷಯ ಮಂಡಿಸಿದರು.
ವಿವಿಯ ಉಪಕುಲಸಚಿವ ಡಾ||ಬಿ.ವಸಂತ ಶೆಟ್ಟಿ ಪ್ರಾಸ್ತಾಪಿಕ ಭಾಷಣ ಮಾಡಿದರು. ವಿವಿಯ ಕುಲಸಚಿವ ಡಾ||ಎನ್. ರಾಮಕೃಷ್ಣ ರೆಡ್ಡಿ, ವಿವಿಯ ಹಣಕಾಸು ಅಧಿಕಾರಿ .ಮಂಜುನಾಥ ಹೆಗ್ದೆ, ಎಸ್.ಡಿ.ಎಂ ದಂತ ವೈದ್ಯಕೀಯ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಸ್. ಜಿ. ಕೊಪ್ಪಡ್ ಹಾಜರಿದ್ದರು.