ಬೆಂಗಳೂರು:
ಪಂಚರಾಜ್ಯ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಹಿನ್ನಡೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ, ಈ ಹಿನ್ನಡೆಯ ಬಗ್ಗೆ ನಮ್ಮ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದರು.
ಚುನಾವಣೆಗಳ ಫಲಿತಾಂಶ ಎನ್ನುವುದು ಜನತೆಯ ಅಭಿಪ್ರಾಯವನ್ನು ಅರಿತುಕೊಳ್ಳಲು ಇರುವ ಅವಕಾಶ. ಅದನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರೆಲ್ಲರೂ ಗೌರವಿಸಬೇಕು. ನಾನು ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ ಎಂದರು.
‘ಬಿಜೆಪಿಯ ಕೋಮುವಾದದ ರಾಜಕಾರಣ ಉತ್ತರಪ್ರದೇಶದಲ್ಲಿ ಯಶಸ್ವಿಯಾಗಿದೆ ಎನ್ನುವುದು ಈ ಫಲಿತಾಂಶದಲ್ಲಿ ಸ್ಪಷ್ಟವಾಗುತ್ತಿದೆ. ಇದು ಬಹಳ ಕಳವಳಕಾರಿ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸಂವಿಧಾನದ ಆಶಯಗಳನ್ನು ಸಿದ್ಧಾಂತವಾಗಿ ನಂಬಿರುವ ಪಕ್ಷ. ಈ ಸಿದ್ಧಾಂತದ ಆಧಾರದಲ್ಲಿಯೇ ಪಕ್ಷವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಪ್ರತಿಯೊಂದು ರಾಜ್ಯದ ರಾಜಕಾರಣ ಮತ್ತೊಂದು ರಾಜ್ಯದ ರಾಜಕಾರಣಕ್ಕಿಂತ ಭಿನ್ನವಾಗಿರುತ್ತದೆ. ಉದಾಹರಣೆಗೆ ಉತ್ತರಪ್ರದೇಶದಲ್ಲಿ ನಮ್ಮ ಪಕ್ಷದ ಸಂಘಟನೆ ಸ್ವಲ್ಪ ದುರ್ಬಲವಾಗಿದೆ. ಅಲ್ಲಿ ಜನತೆಯ ಬೆಂಬಲ ಇದೆ.ಆ ಬೆಂಬಲವನ್ನು ಮತಗಳನ್ನಾಗಿ ಪರಿವರ್ತಿಸುವ ಸಂಘಟನೆ ಕೊರತೆ ಇದೆ.ಅದನ್ನು ಸರಿಪಡಿಸಬೇಕು ಎಂದರು.
ಕರ್ನಾಟಕದಲ್ಲಿ ನಮಗೆ ಜನರ ಬೆಂಬಲವೂ ಇದೆ.ಅದನ್ನು ಮತಗಳನ್ನಾಗಿ ಪರಿವರ್ತಿಸುವ ಪಕ್ಷದ ಸಂಘಟನೆಯೂ ಬಲವಾಗಿದೆ ಎಂದರು.
ನಮ್ಮ ಹಿಂದಿನ ಸರ್ಕಾರ ದ ಸಾಧನೆ ಕೂಡಾ ಜನರ ಮುಂದಿದೆ. ಆದ್ದರಿಂದ ಐದು ರಾಜ್ಯಗಳ ಚುನಾವಣೆ ನಮ್ಮ ರಾಜ್ಯದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.