16ನೇ ಆವೃತ್ತಿಯ ಐಪಿಎಲ್ಗಾಗಿ ಬಿಸಿಸಿಐ ತನ್ನ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಿದೆ. ಈ ಮೊದಲು ಟ್ರೇಡಿಂಗ್ ಮಾಡಿಕೊಳ್ಳಲು ನವೆಂಬರ್15ರವರೆಗೆ ಎಲ್ಲಾ ಫ್ರಾಂಚೈಸಿಗಳಿಗೆ ಬಿಸಿಸಿಐ ಗಡುವು ನೀಡಿತ್ತು. ಬಿಸಿಸಿಐ ಸೂಚನೆಯ ಪ್ರಕಾರ ಎಲ್ಲಾ ತಂಡಗಳು ಕೂಡ ತಮ್ಮಲ್ಲಿ ಉಳಿಸಿಕೊಂಡ ಆಟಗಾರರು ಹಾಗೂ ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿತ್ತು. ಆ ಬಳಿಕ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಸಲು ಬಿಸಿಸಿಐ ತೀರ್ಮಾನಿಸಿತ್ತು. ಆದರೆ ಹಲವು ಫ್ರಾಂಚೈಸಿಗಳು ಮಿನಿ ಹರಾಜಿನ ದಿನಾಂಕವನ್ನು ಬದಲಿಸುವಂತೆ ಬಿಸಿಸಿಐ ಮುಂದೆ ಮನವಿ ಇಟ್ಟಿದ್ದವು. ಆದರೀಗ ಈ ಮನವಿಯನ್ನು ತಿರಸ್ಕರಿಸಿರುವ ಬಿಸಿಸಿಐ ನಿಗದಿಯಂತೆ ಮಿನಿ ಹರಾಜು ನಡೆಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಕ್ರಿಸ್ಮಸ್ ಆಚರಣೆ ಇರುವ ಕಾರಣ ಕೆಲವು ದಿನಗಳ ಹಿಂದೆ ಐಪಿಎಲ್ ಮಿನಿ ಹರಾಜಿನ ದಿನಾಂಕವನ್ನು ಬದಲಾಯಿಸುವಂತೆ ಕೆಲವು ಫ್ರಾಂಚೈಸಿಗಳು ಬಿಸಿಸಿಐ ಮುಂದೆ ವಿನಂತಿಸಿಕೊಂಡಿದ್ದವು. ಅದರಂತೆ ಬಿಸಿಸಿಐ ಕೂಡ ಡಿಸೆಂಬರ್ 23ರ ಬದಲು ಬೇರೆ ದಿನದಂದು ಮಿನಿ ಹರಾಜನ್ನು ನಡೆಸುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ಆದರೀಗ ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್‌ಗೆ ಮಾಹಿತಿ ನೀಡಿದ್ದು, ‘ವ್ಯವಸ್ಥಾಪನಾ ಸಮಸ್ಯೆಗಳ’ ಕಾರಣ ಮಂಡಳಿಯು ಫ್ರಾಂಚೈಸಿಗಳ ವಿನಂತಿಯನ್ನು ತಿರಸ್ಕರಿಸಿದೆ. ಹಾಗಾಗಿ ಸದ್ಯ ಹರಾಜು ನಿಗದಿಯಂತೆಯೇ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ ಎಂದಿದ್ದಾರೆ.
ದಿನಾಂಕ ಬದಲಾವಣೆ ವಿನಂತಿಗೆ ಕಾರಣವೇನು?
ಡಿಸೆಂಬರ್ 25 ರಂದು ಅಂದರೆ ಮಿನಿ ಹರಾಜು ನಡೆಯುವ ಎರಡು ದಿನಗಳ ನಂತರ ಕ್ರಿಸ್ಮಸ್ ಹಬ್ಬವಿದೆ. ಹೀಗಾಗಿ ಕೆಲವು ಫ್ರಾಂಚೈಸಿಗಳ ಸದಸ್ಯರು ಕ್ರಿಸ್ಮಸ್ ಪ್ರಯುಕ್ತ ಕುಟುಂಬದೊಂದಿಗೆ ಪ್ರವಾಸದ ಯೋಜನೆ ಹಾಕಿಕೊಂಡಿದ್ದರು. ಇನ್ನೂ ಕೆಲವು ಫ್ರಾಂಚೈಸಿಗಳ ಸದಸ್ಯರು ಕುಟುಂಬದೊಂದಿಗೆ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಈಗ ನಿಗದಿ ಮಾಡಿರುವ ದಿನಾಂಕವನ್ನು ಬದಲಿಸಬೇಕೆಂದು ಬಿಸಿಸಿಐ ಮುಂದೆ ಮನವಿ ಇಟ್ಟಿದ್ದವು.