ಹೊಸದಿಲ್ಲಿ:
ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್)ದ ವಿರುದ್ಧ ಬೃಹತ್ ಕಾರ್ಯಾಚರಣೆಯಲ್ಲಿ ಶನಿವಾರ ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು 15 ಜನರನ್ನು ಬಂಧಿಸಿದೆ.
ಬಂಧಿತರಲ್ಲಿ ಬೆಂಗಳೂರಿನ ಪುಲಿಕೇಶಿ ನಗರ ವ್ಯಾಪ್ತಿಯ ನಿವಾಸಿ ಅಲಿ ಅಬ್ಬಾಸ್ ಪೇಟಿವಾಲಾ ಸೇರಿದ್ದಾನೆ. ಮುಂಬೈ ಮೂಲದ ಈತ ನಾಲ್ಕು ವರ್ಷಗಳ ಹಿಂದೆ ಪುಣೆಗೆ ಸ್ಥಳಾಂತರಗೊಂಡಿದ್ದು ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ದ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಅದನ್ನು ತೊರೆದಿದ್ದ. ಬೆಂಗಳೂರಿನಲ್ಲಿ ಇದ್ದುಕೊಂಡೇ ದೇಶದ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದ. ಪತ್ನಿ ಬೆಂಗಳೂರಿನಲ್ಲಿ ಆಸ್ಪತ್ರೆಯೊಂದನ್ನು ನಡೆಸುತ್ತಿದ್ದಾಳೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದ ಪಡಘಾ-ಬೋರಿವಲಿ, ಥಾಣೆ, ಮೀರಾ ರೋಡ್ ಮತ್ತು ಪುಣೆ ಹಾಗೂ ಕರ್ನಾಟಕದ ಬೆಂಗಳೂರಿನಲ್ಲಿಯ 44 ಸ್ಥಳಗಳ ಮೇಲೆ ಇಂದು ಬೆಳಗಿನ ಜಾವ ದಾಳಿ ನಡೆಸಿದ ಎನ್‌ಐಎ ತಂಡಗಳು ಭಯೋತ್ಪಾದನೆ, ಭಯೋತ್ಪಾದನೆ ಸಂಬಂಧಿತ ಕೃತ್ಯಗಳು ಮತ್ತು ಐಸಿಸ್ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದ ಆರೋಪದಲ್ಲಿ 15 ಜನರನ್ನು ಬಂಧಿಸಿವೆ. ಈ ದಾಳಿಗಳು ಹಿಂಸಾತ್ಮಕ ಕೃತ್ಯಗಳನ್ನು ನಡೆಸುವ ಐಸಿಸ್ ಪ್ರಯತ್ನಗಳನ್ನು ತಡೆಯುವ ಎನ್‌ಐಎ ಕಾರ್ಯಾಚರಣೆಯ ಭಾಗವಾಗಿದ್ದು, ಭಾರೀ ಪ್ರಮಾಣದಲ್ಲಿ ಲೆಕ್ಕವಿಲ್ಲದ ನಗದು ಹಣ, ಬಂದೂಕುಗಳು, ಹರಿತವಾದ ಶಸ್ತ್ರಾಸ್ತ್ರಗಳು, ಆಕ್ಷೇಪಾರ್ಹ ದಾಖಲೆಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
NIA Swoops Down on 44 Locations in M’Rashtra & K’Nataka, Arrests 15 ISIS Operatives of ISIS Maharashtra Module pic.twitter.com/bcvJBOIA3M
— NIA India (@NIA_India) December 9, 2023
ಎನ್‌ಐಎ ತನಿಖೆಯ ಪ್ರಕಾರ ತಮ್ಮ ವಿದೇಶಿ ನಿರ್ವಾಹಕರ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಆರೋಪಿಗಳು ಐಸಿಸ್‌ನ ಹಿಂಸಾತ್ಮಕ ಮತ್ತು ವಿನಾಶಕಾರಿ ಕೃತ್ಯಗಳನ್ನು ಹೆಚ್ಚಿಸಲು ಸುಧಾರಿತ ಸ್ಫೋಟಕ ಸಾಧನ(ಐಇಡಿ)ಗಳ ತಯಾರಿಕೆ ಸೇರಿದಂತೆ ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ಆರೋಪಿಗಳು ಪಡಘಾ-ಬೋರಿವಲಿಯಿಂದ ಕಾರ್ಯಾಚರಿಸುತ್ತಿರುವ ಐಸಿಸ್‌ನ ಮಹಾರಾಷ್ಟ್ರ ಮಾಡ್ಯೂಲ್‌ನ ಸದಸ್ಯರಾಗಿದ್ದು, ಅಲ್ಲಿ ಭಾರತದಾದ್ಯಂತ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಕೃತ್ಯಗಳನ್ನು ನಡೆಸುವ ಸಂಚು ರೂಪಿಸುತ್ತಿದ್ದರು. ಹಿಂಸಾತ್ಮಕ ಜಿಹಾದ್, ಖಿಲಾಫತ್ ಮತ್ತು ಐಸಿಸ್ ಇತ್ಯಾದಿಗಳನ್ನು ಅನುಸರಿಸುತ್ತಿದ್ದ ಆರೋಪಿಗಳು ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕದಡುವ ಹಾಗೂ ಭಾರತ ಸರಕಾರದ ವಿರುದ್ಧ ಯುದ್ಧವನ್ನು ಸಾರುವ ಉದ್ದೇಶವನ್ನು ಹೊಂದಿದ್ದರು ಎನ್ನುವುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತೆನ್ನಲಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ ಭಾರಿ ಪ್ರಮಾಣದಲ್ಲಿ ದಾಳಿಗಳನ್ನು ನಡೆಸಿದ್ದ ಎನ್‌ಐಎ ಹಲವಾರು ಶಂಕಿತ ಭಯೋತ್ಪಾದಕರನ್ನು ಬಂಧಿಸುವ ಮೂಲಕ ವಿವಿಧ ಐಸಿಸ್ ಮಾಡ್ಯೂಲ್‌ಗಳನ್ನು ಭೇದಿಸಿತ್ತು. ಈ ವರ್ಷದ ಪೂರ್ವಾರ್ಧದಲ್ಲಿ ಮಹಾರಾಷ್ಟ್ರ ಐಸಿಸ್ ಮಾಡ್ಯುಲ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಎನ್‌ಐಎ ಆಗಿನಿಂದ ಐಸಿಸ್‌ನ ವಿವಿಧ ಮಾಡ್ಯೂಲ್‌ಗಳು ಮತ್ತು ಜಾಲಗಳನ್ನು ನಾಶಪಡಿಸಲು ಬಲವಾದ ಮತ್ತು ಸಂಘಟಿತ ಕ್ರಮಗಳನ್ನು ತೆಗೆದುಕೊಂಡಿದೆ.