ಬೆಂಗಳೂರು, ಮಾ.16: “ಕೆ.ಹೆಚ್. ಪಾಟೀಲರು, ವೀರಪ್ಪ ಮೊಯ್ಲಿ, ದೆಹಲಿ ನಾಯಕರು, ಚಂದ್ರಶೇಖರ ಮೂರ್ತಿ ಅವರು ನನ್ನನ್ನು ಗುರುತಿಸಿ ಬಿ ಫಾರಂ ನೀಡದ್ದಕ್ಕೆ ನಾನು ಇಲ್ಲಿಯವರೆಗೂ ಬರಲು ಸಾಧ್ಯವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಮರಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸೋಮವಾರ ನಡೆದ ಕೆ.ಹೆಚ್ ಪಾಟೀಲ್ ಅವರ 101ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಅವರು ಮಾತನಾಡಿದರು.
“ಕೆ.ಹೆಚ್. ಪಾಟೀಲ ಅವರಿಗೂ ನನಗೂ 37 ವರ್ಷಗಳ ಅಂತರವಿದೆ. ನಾನು ಅವರ ಜೊತೆ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿದ್ದೇನೆ. ಪಾಟೀಲರು ಅಧ್ಯಕ್ಷರಾಗಿದ್ದಾಗ ಹಾಗೂ ವೀರಪ್ಪ ಮೊಯ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಇಬ್ಬರೂ ಸೇರಿ ನನಗೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿದರು. ನಂತರ ಅವರ ಜತೆ ಶಾಸಕರಾಗಿ ಕೆಲಸ ಮಾಡಿದ್ದೆ. ನಾನು ಅವರ ಜತೆ ಪಕ್ಷದ ಕಾರ್ಯದರ್ಶಿಯಾಗಿದ್ದೆ. ನಂತರ ಅವರೊಂದಿಗೆ ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ” ಎಂದು ಅವರು ಹೇಳಿದರು.
“ಅವರ ಆಚಾರ, ವಿಚಾರ ಅರ್ಥ ಮಾಡಿಕೊಂಡಿದ್ದೇನೆ. ಇಟ್ಟರೆ ಸಗಣಿಯಾಗು, ತಟ್ಟಿದರೆ ಬೆರಣಿಯಾಗು, ಸುಟ್ಟರೆ ಹಣೆಗೆ ವಿಭೂತಿಯಾಗು, ನೀನಾರಿಗಾದೆಯೋ ಮಾನವ ಎಂಬ ಗೋವಿನ ಹಾಡು ಆಗಾಗ್ಗೆ ನೆನಪಾಗುತ್ತದೆ. ಎಲ್ಲಾ ವಿಚಾರಕ್ಕೂ ಅವರ ಚಿಂತನೆ ಈಗಲೂ ಪ್ರಸ್ತುತ. ಅವರ ದಿಟ್ಟ ನಾಯಕತ್ವ, ಯಾವುದಕ್ಕೂ ಅಂಜುತ್ತಿರಲಿಲ್ಲ. ಅವರು ಅರಣ್ಯ ಸಚಿವರಾಗಿದ್ದರು. ಬಂಗಾರಪ್ಪ ಅವರ ಸಂಪುಟದಲ್ಲಿ ನಾನು, ಮೊಯ್ಲಿ ಸಾಹೇಬರು ಅವರ ಜೊತೆ ಸಹೋದ್ಯೋಗಿಯಾಗಿದ್ದೆವು” ಎಂದು ಅವರು ತಿಳಿಸಿದರು.
“ಪಾಟೀಲರು ರೈತರ ಬದುಕು ಹಾಗೂ ಅರಣ್ಯ ರಕ್ಷಣೆಗೆ ಕೈಗೊಂಡ ತೀರ್ಮಾನ, ಸಹಕಾರ ಕ್ಷೇತ್ರದಲ್ಲಿ ಅವರ ದೂರದೃಷ್ಟಿ ಬಹಳ ದೊಡ್ಡದು. ಒಂದು ಊರಿಗೆ ಒಂದು ಶಾಲೆ, ಒಂದು ಸಹಕಾರಿ ಸಂಘ ಇರಬೇಕು ಎಂದು ಸಹಕಾರ ತತ್ವವನ್ನು ಬೆಳೆಸಿದವರು. ಧಾರವಾಡ ಜಿಲ್ಲೆಯಲ್ಲಿ ದೊಡ್ಡ ನಾಯಕತ್ವ ಬೆಳೆಸಿಕೊಂಡಿದ್ದರು” ಎಂದರು.
“ನನಗೆ ಚುನಾವಣೆ ಟಿಕೆಟ್ ನೀಡುವಾಗ ಕೆಲವರ ಭಿನ್ನಾಭಿಪ್ರಾಯ ಇತ್ತು. ದೆಹಲಿಯವರು ತೀರ್ಮಾನ ಮಾಡಿದರು. ಆಗ ಪಾಟೀಲರು ನನ್ನನ್ನು ಕರೆಸಿ, ನೀನು ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲುತ್ತೀಯಾ ಎಂದು ಕೇಳಿದರು. ನಂತರ ನನಗೆ ಬಿ ಫಾರಂಗೆ ಸಹಿ ಹಾಕಿ ಕೊಟ್ಟರು. ಅಲ್ಲಿಂದ ನನ್ನ ಪಯಣ ಶುರುವಾಗಿದೆ ಇಲ್ಲಿಯವರೆಗೆ ಬಂದಿದೆ. ಮನುಷ್ಯ ಸತ್ತ ನಂತರ ದೇಹ ಭೂಮಿಯ ಒಳಗೆ ಇರುತ್ತದೆ, ಮಾಡಿದ ಸಾಧನೆ ಭೂಮಿಯ ಮೇಲೆ ಇರುತ್ತವೆ” ಎಂದರು.
“ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಅಧಿಕಾರದಲ್ಲಿ ಯಾರು ಹೇಗೆ ಇರುತ್ತಾರೆ ಎಂಬುದಕ್ಕಿಂತ, ಅಧಿಕಾರ ಇದ್ದಾಗ, ಯಾವ ರೀತಿ ಸಾಧನೆ ಮಾಡಿ ಎಷ್ಟು ಜನ ನಾಯಕರನ್ನು ತಯಾರು ಮಾಡುತ್ತಾರೆ ಎಂಬುದು ಮುಖ್ಯ. ಅದೇರೀತಿ ಇಂದು ಅನೇಕ ನಾಯಕರು ಅವರ ಕಾಲದಲ್ಲಿ ಬೆಳೆದಿದ್ದಾರೆ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶ, ದಿಟ್ಟವಾದ ರಾಜಕೀಯ ಬದುಕು ನಮಗೆ ಸ್ಫೂರ್ತಿಯಾಗಿದೆ. ದೇವರಾಜ ಅರಸು ಅವರು ಕೂಡ ವಿಧಾನಸಭೆಯಲ್ಲಿ ಪಾಟೀಲರ ನಿಷ್ಠೆಯನ್ನು ಶ್ಲಾಘಿಸಿದ್ದಾರೆ. ನಾನು ಬಸವಣ್ಣನ ಅನುಯಾಯಿ ಎಂದು ಹೇಳಿದ್ದರು” ಎಂದು ಅವರು ಸ್ಮರಿಸಿದರು.
“ಕೆ.ಹೆಚ್ ಪಾಟೀಲರ ಹೆಸರನ್ನು ಹೆಚ್.ಕೆ. ಪಾಟೀಲ್ ಹಾಗೂ ಅವರ ಶಿಷ್ಯಕೋಟಿಗಳು ಉಳಿಸಿಕೊಂಡು ಹೋಗುತ್ತಿದ್ದಾರೆ. ಅವರಲ್ಲಿದ್ದ ಧೈರ್ಯ ಒಂದು ಮಾತ್ರ ಹೆಚ್.ಕೆ ಪಾಟೀಲ್ ಅವರಲ್ಲಿ ಇಲ್ಲ, ಉಳಿದ ಎಲ್ಲಾ ಗುಣಗಳಿವೆ. ಕೆಲವು ವಿಚಾರಗಳಲ್ಲಿ ಹೆಚ್.ಕೆ. ಪಾಟೀಲರು ತಂದೆಯಂತೆ ಧೈರ್ಯ ತೀರ್ಮಾನ ಮಾಡಿದ್ದರೆ, ಅವರು ಇನ್ನು ಎತ್ತರಕ್ಕೆ ಬೆಳೆಯುತ್ತಿದ್ದರು. ಕೃಷ್ಣ ಅವರ ನಂತರ ಅವರೇ ನಮ್ಮ ನಾಯಕರಾಗುತ್ತಾರೆ ಎಂದು ನಾನು ಭಾವಿಸಿದ್ದೆ” ಎಂದು ಹೇಳಿದರು.
“ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ನಾವು ಏನು ಒಳ್ಳೆಯದನ್ನು ಮಾಡುತ್ತೇವೆ ಎಂಬುದು ಮುಖ್ಯ” ಎಂದು ಅವರು ತಿಳಿಸಿದರು.
