ಅಥಣಿ:
ಬಿಜೆಪಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದೆ ಬಂಡಾಯವೆದ್ದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಮೇಲೆ ಬಿಜೆಪಿ ನಾಯಕರು ಜಿದ್ದಿಗೆ ಬಿದ್ದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ನಾಯಕರ ಮಧ್ಯೆ ದಿನಕ್ಕೊಂದು ಸೇಡಿನ ಮಾತುಗಳು ಹೊರಬರುತ್ತಲೇ ಇವೆ.
ಇಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಜಗದೀಶ್ ಶೆಟ್ಟರ್ ನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸಲು ಪಣತೊಟ್ಟಿರುವುದಾಗಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ, ಕುಡಚಿ ಹಾಗೂ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಸಾರ್ವಜನಿಕ ಸಭೆಗಳನ್ನು ನಡೆಸಿ ಪಕ್ಷದ ಪರ ಪ್ರಚಾರ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಸವದತ್ತಿಯಲ್ಲಿ ಸುಕ್ಷೇತ್ರ ಯಲ್ಲಮ್ಮ ದೇವಿ ಸನ್ನಿದಿಗೆ ತೆರಳಿ, ದೇವಿಯ ದರ್ಶನ ಪಡೆದು, ರಾಜ್ಯದ ಸರ್ವಾಂಗೀಣ ಒಳಿತಿಗಾಗಿ ವಿಶೇಷ ಪೂಜೆ ಪ್ರಾರ್ಥನೆಗಳನ್ನು… pic.twitter.com/H3TGfzu8OD
— B.S.Yediyurappa (@BSYBJP) April 26, 2023
ಇಂದು ಅಥಣಿಯಲ್ಲಿ ಮಾತನಾಡಿರುವ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಬೆನ್ನಿಗೆ ಚೂರಿ ಹಾಕಿದ್ದಾರೆ. ಅವರನ್ನು ಸೋಲಿಸುವ ಜವಾಬ್ದಾರಿ ನನ್ನದು ಎಂದಿದ್ದಾರೆ. ಬಿಜೆಪಿ ಶೆಟ್ಟರ್ ಅವರಿಗೆ ಎಲ್ಲಾ ಸ್ಥಾನಮಾನಗಳನ್ನು ನೀಡಿದರೂ ಪಕ್ಷ ಬಿಟ್ಟು ಹೋಗುವ ಅನಿವಾರ್ಯತೆ ಅವರಿಗೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಇಂದು ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದು ನೋಡಿದರೆ ಈ ಬಾರಿ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಸೋಲುವುದು ಖಚಿತ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ, ರಾಜ್ಯದಲ್ಲಿ ಬಿಜೆಪಿ 130 ಕ್ಕೂ ಹೆಚ್ಚು ಸೀಟು ಪಡೆದು ಸರ್ಕಾರ ರಚಿಸುವುದು ಅಷ್ಟೇ ಸತ್ಯ. 25 ರಿಂದ 30 ಸಾವಿರ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಗೆಲ್ಲಲಿದ್ದಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ವಿಧಾನ ಪರಿಷತ್ ಅವಧಿ 5 ವರ್ಷ 2 ತಿಂಗಳು ಇದ್ದರೂ ಸಹ ಲಕ್ಷ್ಮಣ ಸವದಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಎಲ್ಲಾ ಅಧಿಕಾರ ಅನುಭವಿಸಿಯೂ ಶೆಟ್ಟರ್ ಬಿಜೆಪಿ ತೊರೆದಿದ್ದಾರೆ. ಇಲ್ಲಿ ಶೆಟ್ಟರ್ ಅವರನ್ನು ಸೋಲಿಸುವ ಜವಬ್ದಾರಿ ನನ್ನದು, ಲಕ್ಷ್ಮಣ ಸವದಿ ಅವರನ್ನು ಸೋಲಿಸುವ ಜವಾಬ್ದಾರಿ ನಿಮ್ಮದು ಎಂದು ಜನರಿಗೆ ಕರೆ ನೀಡಿದ್ದಾರೆ.