ಹುಬ್ಬಳ್ಳಿ:
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ ಕ್ಷೇತ್ರಗಳ ಪೈಕಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವೂ ಒಂದಾಗಿತ್ತು. ಇಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಗದೀಶ್ ಶೆಟ್ಟರ್ ಅವರು ಸೋತಿದ್ದು, ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಗೆಲುವಿನ ನಗೆ ಬೀರಿದ್ದಾರೆ.
ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್, ನನ್ನನ್ನು ಸೋಲಿಸಬೇಕೆಂದು ಹಲವರು ಪಣ ತೊಟ್ಟಿದ್ದರು. ಅವರ ಆಸೆ ಈಡೇರಿದೆ. ಅವರು ನನ್ನನ್ನು ಸೋಲಿಸುವ ಜೊತೆಗ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರೆ. ಜನರ ತೀರ್ಮಾನವನ್ನು ಗೌರವಿಸುತ್ತೇನೆ ಎಂದರು.
ಸೋತಿದ್ದಕ್ಕೆ ದು:ಖ ಇಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರು ನನಗೆ ಪೆಟ್ಟು ಕೊಡಲು ಹೋಗಿ ಬಿಜೆಪಿಗೆ ಪೆಟ್ಟು ಕೊಟ್ಟಿದ್ದಾರೆ. ನನ್ನನ್ನು ಸೋಲಿಸಲು ಷಡ್ಯಂತ್ರ ಮಾಡಿದ್ದರಿಂದ ಬಿಜೆಪಿ ಅವಸಾನದ ಅಂಚಿಗೆ ಬಂದಿದೆ. ನಾನು ಸಿಂದಗಿ, ಮುದ್ದೇಬಿಹಾಳ, ಕೊಪ್ಪಳ, ಹಾವೇರಿ ಸೇರಿದಂತೆ ಹಲವು ಕಡೆ ಪ್ರವಾಸ ಮಾಡಿದ್ದೆ. ಅಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಿದರು.
ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದರ ಪರಿಣಾಮ ಮುಂಬೈ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಇಡೀ ರಾಜ್ಯದಲ್ಲಿ ಆಗಿದೆ ಎಂದರು. ಲಿಂಗಾಯತರ ಪ್ರಭಾವ ಇರುವ ಕಡೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಸೋಮಣ್ಣ, ಮುರುಗೇಶ್ ನಿರಾಣಿ, ಶ್ರೀರಾಮುಲು, ಕಾರಜೋಳ ಅವರಂತಹ ಪ್ರಮುಖರು ಸೋತಿದ್ದಾರೆ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸೆಂಟ್ರಲ್ ಕ್ಷೇತ್ರದಲ್ಲಿ ನನ್ನನ್ನು ಟಾರ್ಗೆಟ್ ಮಾಡಿ ಹಣ, ಅಧಿಕಾರದ ಪ್ರಭಾವ ಬಳಸಿದರು. ಇಡಿ, ಐಟಿ ದಾಳಿಯ ಬೆದರಿಕೆ ಹಾಕಿ ಭಯದ ವಾತಾವರಣ ಸೃಷ್ಟಿಸಿ ಗೆದ್ದಿದ್ದಾರೆ. ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಈ ಭಾಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.